ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ದೇಶದಲ್ಲಿ ಆಹಾರ ಭದ್ರತೆ ಇದೆ. ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯಡಿ ಬಡವರು, ದುರ್ಬಲರು, ಮಹಿಳೆಯರು, ಅಂಗವಿಕಲರು, ವೃದ್ಧರು ಸೇರಿದಂತೆ ಪ್ರತಿಯೊಬ್ಬರಿಗೂ ಸಮರ್ಪಕ ಆಹಾರ ಒದಗಿಸುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಉದ್ದೇಶವಾಗಿದೆ. ಸರ್ಕಾರದ ಆಹಾರ ಯೋಜನೆ, ಕಾರ್ಯಕ್ರಮಗಳ ಪರಿಶೀಲನೆಗಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದರು.
ಆಹಾರ ಭದ್ರತೆಯಷ್ಟೆ ಆಹಾರ ಸುರಕ್ಷತೆಯು ಮಹತ್ವ ಪಡೆದಿದೆ. ಅಂಗನವಾಡಿ ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಸುರಕ್ಷತೆ ಹಾಗೂ ಗುಣಮಟ್ಟದ ಆಹಾರ ಪೂರೈಸುವುದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ, ನೌಕರರ ಜವಾಬ್ದಾರಿಯಾಗಿದೆ. ಆಹಾರ ಭದ್ರತಾ ಕಾಯ್ದೆ ವ್ಯಾಪ್ತಿಗೆ 14 ಇಲಾಖೆಗಳು ಬರಲಿವೆ. ಆಹಾರ ಕಾಯ್ದೆ, ಸುರಕ್ಷತೆಯ ಬಗ್ಗೆ ಜನರಿಗೆ ಅರಿವಿನ ಕೊರತೆ ಇದ್ದು, ಪ್ರತಿಯೊಬ್ಬರಿಗೂ ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.ವಿವಿಧ ಜಿಲ್ಲೆಗಳಿಗೆ ಭೇಟಿ ಸಂದರ್ಭದಲ್ಲಿ ಆಹಾರ ಪೂರೈಕೆ ಸಂಬಂಧ ಲೆಕ್ಕ ಪರಿಶೋಧನೆ, ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ದಾಖಲಾಗುವ ದೂರುಗಳು ಹಾಗೂ ಆಹಾರ ಉಗ್ರಾಣಗಳಲ್ಲಿ ಸ್ವಚ್ಚತೆ ಸೇರಿದಂತೆ ಮೂಲಸೌಲಭ್ಯಗಳ ಪರಿಶೀಲನೆ, ಅರ್ಹರಿಗೆ ಪಡಿತರ ಚೀಟಿ ವಿತರಣೆ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಮರ್ಪಕ ವಿತರಣೆ, ಬಯೋಮೆಟ್ರಿಕ್ ನಿರ್ವಹಣೆಯಲ್ಲಿ ಸಾರ್ವಜನಿಕ ದೂರುಗಳನ್ನು ಆಯೋಗ ಪರಿಶೀಲಿಸುತ್ತಿದೆ. ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಅಂಗನವಾಡಿ ಮೂಲಕ ಗರ್ಭಿಣಿಯರಿಗೆ, ತಾಯಂದಿರಿಗೆ ಪೌಷ್ಠಿಕ ಆಹಾರವನ್ನು ತಲುಪಿಸಬೇಕು. ಯಾವುದೇ ಕಾರಣಕ್ಕೂ ಪೋಷಣಾ ಹಕ್ಕುಗಳ ಉಲ್ಲಂಘನೆ ಆಗಬಾರದು. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮತ್ತು ವೃದ್ಧಾಶ್ರಮಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ಪ್ರತಿಯೊಬ್ಬರ ಅಹಾರದ ಹಕ್ಕುಗಳಿಗೂ ಕಾನೂನಿನಾತ್ಮಕ ರಕ್ಷಣೆ ಇದೆ. ಬಡವರಿಗೆ ಹಾಗೂ ದುರ್ಬಲ ವರ್ಗದವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಚಾಮರಾಜನಗರ ಜಿಲ್ಲೆಯಲ್ಲಿ ಆಹಾರ ಉಗ್ರಾಣದ ಅವಶ್ಯವಿದೆ. 90 ಸಾವಿರ ಕ್ವಿಂಟಾಲ್ ದಾಸ್ತಾನು ಇಡಲು ಸುಸಜ್ಜಿತ ಉಗ್ರಾಣ ತೆರೆಯಲು ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಹೇಳಿದರು.