ಮದ್ದೂರಿನಲ್ಲಿ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ಕ್ರಮ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : May 18, 2026, 01:45 AM IST
17ಕೆಎಂಎನ್ ಡಿ26  | Kannada Prabha

ಸಾರಾಂಶ

ಬಸವಣ್ಣರ ಪುತ್ಥಳಿಯನ್ನು ನಿರ್ಮಾಣ ಮಾಡಿ ಎಂದು ಯಾರೂ ನನಗೆ ಅರ್ಜಿ ನೀಡಿರಲಿಲ್ಲ. ಆದರೂ ಬಸವಣ್ಣನವರು ಸಮಾಜಕ್ಕೆ ನೀಡಿರುವ ಕೊಡುಗೆ ಗಮನಿಸಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿನಿತ್ಯ ಜನರಿಗೆ ಅವರ ದರ್ಶನವಾಗಬೇಕು ಎಂಬ ಸುದುದ್ದೇಶದಿಂದ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ನಗರದ ಕೊಲ್ಲಿ ವೃತ್ತದದಲ್ಲಿ ನಿರ್ಮಾಣ ಮಾಡಲು ನಗರಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಮುಂದಿನ ವರ್ಷ ಬಸವಣ್ಣನವರ ಜಯಂತಿಯಂದು ಲೋಕಾರ್ಪಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ವ್ಯಕ್ತಪಡಿಸಿದರು.

ನಗರದ ಶ್ರೀರಾಮ ಮಂದಿರ ಪಾರ್ಕ್ ಬಳಿ ಭಾನುವಾರ ನಡೆದ ವಿಶ್ವಗುರು ಬಸವೇಶ್ವರ ಜಯಂತ್ಯುತ್ಸವ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣರ ಪುತ್ಥಳಿಯನ್ನು ನಿರ್ಮಾಣ ಮಾಡಿ ಎಂದು ಯಾರೂ ನನಗೆ ಅರ್ಜಿ ನೀಡಿರಲಿಲ್ಲ. ಆದರೂ ಬಸವಣ್ಣನವರು ಸಮಾಜಕ್ಕೆ ನೀಡಿರುವ ಕೊಡುಗೆ ಗಮನಿಸಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿನಿತ್ಯ ಜನರಿಗೆ ಅವರ ದರ್ಶನವಾಗಬೇಕು ಎಂಬ ಸುದುದ್ದೇಶದಿಂದ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಜಗಜ್ಯೋತಿ ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರ ವಚನಗಳು, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

12 ನೇಶತಮಾನದಲ್ಲಿ ಇದ್ದಂತಹ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಬಸವಣ್ಣನವರು ಚಾಲನೆ ನೀಡಿದರು. ಆದರೆ, 900 ವರ್ಷಗಳಾದರೂ ಅಂದಿನ ಸಮಸ್ಯೆಗಳು ಇಂದಿಗೂ ಕಾಣುತ್ತಿವೆ. ಅಂದರೆ ಬಸವಣ್ಣನವರ ವಚನಗಳನ್ನು ನಾವು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಸವಾದಿ ಶರಣರು ವಿದ್ಯೆ, ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿ ಸಮಾನತೆ ಹಾಗೂ ಸಮಾಜ ಸುಧಾರಣೆಗೆ ಶ್ರಮಿಸಿದವರು. ಎಲ್ಲಾ ಕಾಯಕಗಳನ್ನು ಪೂಜೆಗೆ ಸಮಾನ ಎನ್ನುವ ಕಲ್ಪನೆಯನ್ನು ತಂದವರು. ಶರಣರು ಸಮಾಜದಲ್ಲಿನ ನೋವನ್ನು ಉಂಡವರು. ವಚನಗಳು ಅವರ ಹಿಂದಿನ ಆಶಯಗಳನ್ನು ನಾವು ಅರಿಯಬೇಕಿದೆ ಎಂದರು.

ಪಾಂಡವಪುರ ಬೇಬಿಬೆಟ್ಟದ ಶ್ರೀರಾಮ ಯೋಗೀಶ್ವರ ಮಠದ ಶ್ರೀಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಣ್ಣನವರು 12 ನೇ ಶತಮಾನದ ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಹಾಗೂ ಕನ್ನಡದ ಶ್ರೇಷ್ಠ ವಚನಕಾರರು. ಜಾತಿ, ಲಿಂಗ ತಾರತಮ್ಯ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ, ಸಮಾನತೆ ಮತ್ತು ಕಾಯಕದ ಮಹತ್ವವನ್ನು ಸಾರಿದರು ಮಹಾನ್ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಶರಣು ವಿಶ್ವವಚನ ಫೌಂಡೇಶನ್ ಶರಣೆರೂಪ ಕುಮಾರಸ್ವಾಮಿ ಅವರಿಗೆ ಶರಣೆ ಅಕ್ಕ ಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಾಸಭಾದಿಂದ ಶಾಸಕ ಕೆ.ಎಂ.ಉದಯ್ ಅವರನ್ನು ಸನ್ಮಾನಿಸಲಾಯಿತು. ಶರಣು ವಿಶ್ವ ಫೌಂಡೇಶನ್ ಅಧ್ಯಕ್ಷ ವಚನಕುಮಾರಸ್ವಾಮಿ ಅವರು ಬಸವ ನುಡಿಗಳನ್ನು ಆಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರಿಗೆ ಪ್ರಸಾದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಜಾಗತಿಕ ಲಿಂಗಾಯುತ ಮಹಾಸಭಾ (ಜೆಎಲ್ಎಂ) ತಾಲೂಕು ಅಧ್ಯಕ್ಷ ಶಿವಾನಂದ, ಶರಣ ಸಾಹಿತ್ಯ ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಮೈಸೂರು ಮಹದೇವಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಜೆಎಲ್ಎಂ ಕಾರ್ಯದರ್ಶಿ ಎಚ್.ಶಿವರುದ್ರಪ್ಪ, ಹಿರಿಯ ಉಪಾಧ್ಯಕ್ಷ ಮೆಣಸಗೆರೆ ಶಿವಲಿಂಗಪ್ಪ, ಗ್ರಾಮ ಸದಸ್ಯ ಮನುಕುಮಾರ್, ಎಂ.ಬಸವರಾಜು, ಎಚ್.ಕೆ.ಕೆಂಪಣ್ಣ, ಮಹದೇವಸ್ವಾಮಿ, ಮಹಾಲಿಂಗಪ್ಪ, ಕೆಂಪರಾಜು, ಮುಖಂಡ ವಿಜಯ್ ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆ ಆರಂಭ, ಮಾರಾಟ ಈಗ ಸರಳ
ಮೋದಿ ಸರ್ಕಾರದಿಂದ ದಾಖಲೆ ನಿರುದ್ಯೋಗ: ಮಂಜುನಾಥ್‌