ರಾಮನಗರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಮತ್ತು ವಿತರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ಎಚ್ಚರಿಕೆಯ ಕ್ರಮವಹಿಸಬೇಕು ಎಂದು ರಸಗೊಬ್ಬರ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಾಗೂ ಮಾರಾಟಗಾರರಿಗೆ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಸೂಚನೆ ನೀಡಿದರು
ರಾಮನಗರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಮತ್ತು ವಿತರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ಎಚ್ಚರಿಕೆಯ ಕ್ರಮವಹಿಸಬೇಕು ಎಂದು ರಸಗೊಬ್ಬರ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಾಗೂ ಮಾರಾಟಗಾರರಿಗೆ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಕೃಷಿ ಪರಿಕರ ತಯಾರಕ ಮತ್ತು ಮಾರಟಗಾರರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತಾನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಹಾಗೂ ಕೃತಕ ಅಭಾವ ಸೃಷ್ಟಿಸಿದ ಪ್ರಕರಣ ಕಂಡು ಬಂದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರಸಗೊಬ್ಬರ ಮಾರಾಟ ಪ್ರಮಾಣವನ್ನು ಗಮನಿಸಬೇಕು, ಅಗತ್ಯವಿರುವ ಪ್ರಮಾಣವನ್ನು ಮುಂಜಾಗ್ರತೆಯಾಗಿ ದಾಸ್ತಾನು ಮಾಡಿಕೊಂಡು ಬೇಡಿಕೆಗೆ ತಕ್ಕಂತೆ ಪೂರೈಸಬೇಕು. ರೈತರಿಗೆ ಯಾವುದೇ ಅಡೆತಡೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸೂಚಿಸಿದರು.
ರೈತರಿಗೆ ರಸಗೊಬ್ಬರ ಲಭ್ಯತೆ ಬಗ್ಗೆ ಅರಿವು ಮೂಡಿಸಲು ಮತ್ತು ರಸಗೊಬ್ಬರಗಳಿಗೆ ಪರ್ಯಾಯವಾಗಿ ಸಾವಯವ ಗೊಬ್ಬರ ಹೆಚ್ಚು ಬಳಕೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳು ಜಾಗೃತಿ ಮೂಡಿಸಬೇಕು, ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ದಾಸ್ತಾನು ಮತ್ತು ಗರಿಷ್ಟ ಮಾರಟ ದರ ವಿವರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಜನತೆಗೆ ಯೂರಿಯಾ ರಸಗೊಬ್ಬರವನ್ನು ಪಿಒಎಸ್ ಯಂತ್ರದಲ್ಲಿ ಕಡ್ಡಾಯವಾಗಿ ಮಾರಾಟ ಮಾಡಲು ಕ್ರಮ ವಹಿಸಬೇಕು ಎಂದು ಯಶವಂತ್ ವಿ.ಗುರುಕರ್ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಬೆಳೆ ವಿಮೆ ಯೋಜನೆ, ಬೆಳೆ ಸಮೀಕ್ಷೆ ರಾಷ್ಟ್ರೀಯ ಆಹಾರ ಭದ್ರತಾ, ಮತ್ತು ಪೌಷ್ಠಿಕ ಅಭಿಯಾನ ಮತ್ತು ಸೂಕ್ಷ್ಮನೀರಾವರಿ ಯೋಜನೆಗಳ ಕುರಿತು ಚರ್ಚಿಸಲಾಯಿತು. ಈ ಯೋಜನೆಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಯಾವುದೇ ಲೋಪವಿಲ್ಲದೆ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಸಭೆಯಲ್ಲಿ 2026ರ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆ ಬಗ್ಗೆ ಪ್ರಚಾರ ಮಾಡಲು ಭಿತ್ತಿ ಪತ್ರ ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಜಿಲ್ಲೆಯ ಹೆಚ್ಚಿನ ರೈತರು ನೋಂದಣಿಯಾಗಲು ಶ್ರಮಿಸುವಂತೆ ತಿಳಿಸಿದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ)ದ ಎಂ.ರಮೇಶ್ , ರೇಷ್ಮೆ, ತೋಟಗಾರಿಕೆ, ಅರಣ್ಯ, ಸಾಂಖ್ಯಿಕ ಇಲಾಖೆ, ವಾಣಿಜ್ಯತೆರಿಗೆ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರುಗಳು, ವಿಮಾ ಸಂಸ್ಥೆಯ ಪ್ರತಿನಿಧಿಗಳು, ರಸಗೊಬ್ಬರ ಸರಬರಾಜು ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜಿಲ್ಲಾ ಸಗಟು ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.
ಬಾಕ್ಸ್.................
4,946 ಮೆಟ್ರಿಕ್ ಟನ್ ದಾಸ್ತಾನು:
ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 84,953 ಹೆಕ್ಟೇರ್ ಆಹಾರಧಾನ್ಯ ಮತ್ತು 1,407 ಹೆಕ್ಟೇರ್ ಎಣ್ಣೆಕಾಳು ಸೇರಿ 86,360 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಎನ್.ಅಂಬಿಕಾ ಹೇಳಿದರು.
ಬಿತ್ತನೆಗೆ ಅನುಗುಣವಾಗಿ ಮುಂಗಾರು ಹಂಗಾಮಿಗೆ ಯೂರಿಯಾ-19,562 ಮೆಟ್ರಿಕ್ ಟನ್, ಡಿಎಪಿ-1,704 ಮೆಟ್ರಿಕ್ ಟನ್, ಎಂಒಪಿ-448 ಮೆಟ್ರಿಕ್ ಟನ್, ಎಸ್‌ಎಸ್‌ಪಿ-776 ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್-5,797 ಮೆಟ್ರಿಕ್ ಟನ್ ಸೇರಿ 28,287 ಮೆಟ್ರಿಕ್ ಟನ್ ಬೇಡಿಕೆ ಇದೆ ಪ್ರಸ್ತುತ ಜಿಲ್ಲೆಯಲ್ಲಿ ಯೂರಿಯಾ-2,705 ಮೆಟ್ರಿಕ್ ಟನ್, ಡಿಎಪಿ-411 ಮೆಟ್ರಿಕ್ ಟನ್, ಎಂಒಪಿ-201 ಮೆಟ್ರಿಕ್ ಟನ್, ಎಸ್‌ಎಸ್‌ಪಿ-156 ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್-1,474 ಮೆಟ್ರಿಕ್ ಟನ್ ಸೇರಿ 4,946 ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.
30ಕೆಆರ್ ಎಂಎನ್ 1.ಜೆಪಿಜಿ
ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ರವರು ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆ ಬಗ್ಗೆ ಪ್ರಚಾರ ಮಾಡಲು ಭಿತ್ತಿ ಪತ್ರ ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.