ಬಳ್ಳಾರಿ: ನಗರದ ಸ್ವಚ್ಛತೆ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಕಂಡ ಕಂಡಲ್ಲಿ ಕಸ ಹಾಕುವವರನ್ನು ನಿಯಂತ್ರಿಸಲು ಮಹಾನಗರ ಪಾಲಿಕೆಯಿಂದ ಎಲ್ಲ ವಾರ್ಡ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ತಿಳಿಸಿದರು.
ಸ್ವಚ್ಛ ಮತ್ತು ಸ್ವಸ್ಥ ಬಳ್ಳಾರಿಯನ್ನಾಗಿ ನಿರ್ಮಾಣ ಮಾಡಲು ಸಾರ್ವಜನಿಕರ ಪಾತ್ರ ಪ್ರಮುಖವಾದದ್ದು. ಜನರಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಪಾಲಿಕೆಯ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಜನಜಾಗೃತಿಗೆ ಆಯಾ ವಾರ್ಡ್‍ಗಳ ಯುವಕರ ಸಂಘ- ಸಂಸ್ಥೆಗಳ ಸಹಕಾರ ತೆಗೆದುಕೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರನ್ನು ನಿಯಂತ್ರಿಸುವಂತಾಗಬೇಕು ಎಂದು ಸಲಹೆ ನೀಡಿದರು.
ನಗರದಲ್ಲಿ ಬಿಡಾಡಿ ದನಗಳ ಹಾವಳಿ ತೀವ್ರವಾಗಿದ್ದು, ವಾಹನ ಸವಾರರಿಗೆ ಅಡ್ಡಿಯನ್ನುಂಟು ಮಾಡುತ್ತಿವೆ ಎಂದು ಸದಸ್ಯರು ಸಚಿವರ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಸಚಿವರು, ಬಿಡಾಡಿ ದನಗಳ ಮಾಲೀಕರು ತಮ್ಮ ಆವರಣದಲ್ಲಿಯೇ ಕಟ್ಟಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳು ಕೇಸ್ ದಾಖಲು ಮತ್ತು ದಂಡ ವಿಧಿಸುವ ಕುರಿತು ಎಚ್ಚರಿಕೆ ನೀಡಬೇಕು. ಮಾಲೀಕತ್ವ ಇಲ್ಲದವುಗಳನ್ನು ಕೂಡಲೇ ವಶಕ್ಕೆ ಪಡೆದು, ಗೋಶಾಲೆಗಳಿಗೆ ರವಾನಿಸುವ ಕ್ರಮ ವಹಿಸಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿನ ಹಳೆಯ ತಹಸೀಲ್ದಾರರ ಕಚೇರಿ ಆವರಣವನ್ನು ಮುಂದಿನ ದಿನಗಳಲ್ಲಿ ಸುಮಾರು ₹30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಪಾಲಿಕೆಯ ಸದಸ್ಯರ ಕೊಠಡಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸಚಿವ ಬಿ. ನಾಗೇಂದ್ರ ಅವರು ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯರೆಲ್ಲರೂ ಸಮ್ಮತಿ ವ್ಯಕ್ತಪಡಿಸಿದರು.
ನಗರದಲ್ಲಿ ಬೀದಿನಾಯಿಗಳಿಗೆ ಆಂಟಿರೇಬೀಸ್ ವ್ಯಾಕ್ಸಿನೇಷನ್ ಮತ್ತು ಸಂತಾನಹರಣ ಚಿಕಿತ್ಸೆಯ ಕಾರ್ಯಕ್ಕೆ ಬಾಕಿ ಉಳಿದ ಹಣವನ್ನು ಪಾಲಿಕೆಯ ಸಾಮಾನ್ಯ ನಿಧಿಯಡಿಯಲ್ಲಿ ಪಾವತಿ ಮಂಜೂರಾತಿಗೆ ಸದಸ್ಯರು ಅನುಮೋದನೆ ನೀಡಿದರು.