ಅಂದಾಜು ಪುರಸಭೆಗೆ 8,96,999 ರು. ಉಳಿತಾಯ: ಪುರಸಭೆ ಅಧ್ಯಕ್ಷ ಪರಮೇಶ್
ಕನ್ನಡಪ್ರಭ ವಾರ್ತೆ, ತರೀಕೆರೆತರೀಕೆರೆ ಪುರಸಭೆಯನ್ನು ಜನಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಮತ್ತು ಚುನಾಯಿತ ಪ್ರತಿನಿಧಿಗಳ ಸಲಹೆ ಮತ್ತು ಅಭಿಪ್ರಾಯ ಪಡೆದು ಉತ್ತಮ ಬಜೆಟ್ ಮಂಡಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಪರಮೇಶ್ ತಿಳಿಸಿದರು.
ಪುರಸಭೆ ಕಾರ್ಯಾಲಯದಿಂದ ಪುರಸಭಾ ಸಭಾಂಗಣದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದರು. ತರೀಕೆರೆ ಪುರಸಭೆ 2024-25ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯಂತೆ 2024-25ನೇ ಸಾಲಿಗೆ 8,96,999 ರು. ಒಟ್ಟು ಉಳಿತಾಯವಾಗಲಿದೆ. ಪುರಸಭೆ ನಿರೀಕ್ಷಿತ ಸ್ವಂತ ಆದಾಯ ಮೂಲಗಳಿಂದ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದಿಂದ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಪುರಸಭೆ ಸದಸ್ಯ ಲೋಕೇಶ್ ಮಾತನಾಡಿ ಪಟ್ಟಣದಲ್ಲಿರುವ ಸ್ಮಶಾನಗಳ ಸ್ವಚ್ಛತೆ ಇನ್ನಿತರೆ ಮೂಲ ಸೌಕರ್ಯ ಒದಗಿಸುವ ಸಲುವಾಗಿ ಮೀಸಲಿಟ್ಟಿರುವ 10 ಲಕ್ಷ ರು.ಗಳು ಸಾಕಾಗುವುದಿಲ್ಲ. ಪಟ್ಟಣದಲ್ಲಿ ಹಾದುಹೋಗಿರುವ ಕುಡಿಯುವ ನೀರಿನ ಕಾಮಗಾರಿಗಾಗಿ ರಸ್ತೆ ಬಗೆಯಲಾಗಿದ್ದು, ಕಾಮಗಾರಿ ನಂತರ ಮತ್ತೆ ಡಾಂಬರೀಕರಣ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ತಿಳಿಸಿದರು.ಪುರಸಬೆ ಸದಸ್ಯ ಟಿ.ಜಿ.ಶಶಾಂಕ್ ಮಾತನಾಡಿ, ಕ್ರಾಂತಿಕಾರಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು ಹೆಮ್ಮೆಯ ವಿಚಾರ. ಆ ವಿಚಾರವಾಗಿ ಪುರಸಭೆಯಿಂದ ಬೆಂಬಲದ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಈ ಬಾರಿ ಪುರಸಭೆ ಬಜೆಟ್‌ನಲ್ಲಿ ಸಾಮಾಜಿಕ ನ್ಯಾಯ ಕಾಣುತ್ತಿದೆ. ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದು ಎಷ್ಟು ಮುಖ್ಯವೋ, ಅದನ್ನು ಅನುಷ್ಠಾನಕ್ಕೆ ತರುವುದೂ ಅಷ್ಟೇ ಮುಖ್ಯ. ಪಟ್ಟಣದಲ್ಲಿ ವಿಳಂಬವಾಗಿರುವ 15ನೇ ಹಣಕಾಸು ಯೋಜನೆಯಲ್ಲಿನ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಸದಸ್ಯರು ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಸವರಾಜು, ಗಿರಿಜಾ ಪ್ರಕಾಶ್ ವರ್ಮ, ಚೇತನ್ ಮತ್ತಿತರರು ಮಾತನಾಡಿದರು.ಪುರಸಭೆ ಉಪಾಧ್ಯಕ್ಷೆ ದಿವ್ಯಾರವಿ, ಪುರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.
1ಕೆಟಿಆರ್.ಕೆ.1ಃತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ ಏರ್ಪಡಿಸಿದ್ದ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪರಮೇಶ್ 2024-25ನೇ ಸಾಲಿನ ಬಜೆಟ್ ಮಂಡಿಸಿದರು. ಪುರಸಭೆ ಉಪಾಧ್ಯಕ್ಷೆ ದಿವ್ಯಾ ರವಿ, ಪುರಸಬೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.