ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯ ಹುದ್ದೆ ಭರ್ತಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಅರ್ಜಿ ಆಹ್ವಾನಿಸಿ ಆ. 25ರಂದು ಅಧಿಸೂಚನೆ ಹೊರಡಿಸಿದೆ.
ಕುಷ್ಟಗಿ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿಂದ ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣ, ಪೌಷ್ಟಿಕ ಆಹಾರ ವಿತರಣೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ, ಆರೋಗ್ಯ ಜಾಗೃತಿ ಸೇರಿದಂತೆ ವಿವಿಧ ಚಟುವಟಿಕೆಗಳ ನಿರ್ವಹಣೆಗೆ ತೊಂದರೆಯಾಗುತ್ತಿರುವ ಕುರಿತು ಕನ್ನಡಪ್ರಭ ಜು.17ರಂದು ಸಿಬ್ಬಂದಿ ಕೊರತೆಯಿಂದ ಸೊರಗಿದ ಅಂಗನವಾಡಿ ಕೇಂದ್ರ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.ಕುಷ್ಟಗಿ ತಾಲೂಕಿನಲ್ಲಿ 15 ಕಾರ್ಯಕರ್ತೆ ಹಾಗೂ 22 ಸಹಾಯಕಿಯರು ಸೇರಿದಂತೆ ಒಟ್ಟು 37 ಹುದ್ದೆಗಳು ಖಾಲಿ ಇರುವುದನ್ನು ವರದಿಯಲ್ಲಿ ಬೆಳಕಿಗೆ ತರಲಾಗಿತ್ತು. ಸಿಬ್ಬಂದಿ ಕೊರತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲೆಯೇ ಹೆಚ್ಚುವರಿ ಜವಾಬ್ದಾರಿ ಬೀಳುತ್ತಿರುವುದನ್ನೂ ವರದಿ ಪ್ರಸ್ತಾಪಿಸಿತ್ತು.
ಜಿಲ್ಲೆಯಲ್ಲಿ 215 ಹುದ್ದೆ: ಇಲಾಖೆಯ ಅಧಿಸೂಚನೆಯಂತೆ ಕೊಪ್ಪಳ ಜಿಲ್ಲೆಯಲ್ಲಿ 28 ಅಂಗನವಾಡಿ ಕಾರ್ಯಕರ್ತೆ ಹಾಗೂ 187 ಸಹಾಯಕಿಯರ ಒಟ್ಟು 215 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕುಷ್ಟಗಿ ತಾಲೂಕಿನಲ್ಲಿ 3 ಕಾರ್ಯಕರ್ತೆ ಹಾಗೂ 22 ಸಹಾಯಕಿಯರು ಸೇರಿದಂತೆ 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.