ಕನ್ನಡಪ್ರಭ ವಾರ್ತೆ ಹಾಸನ
೧೮ ವರ್ಷದೊಳಗಿನ ಮಕ್ಕಳನ್ನು ಮದ್ಯ ಖರೀದಿಗೆ ಬಳಸಿಕೊಳ್ಳುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಹುದು, ಮದ್ಯಕ್ಕೆ ಬಲಿಯಾಗಿ ಶಿಕ್ಷಣ ತ್ಯಜಿಸುವ ಸಾಧ್ಯತೆಯಿದ್ದು, ಅಪರಾಧ ಚಟುವಟಿಕೆಗಳಿಗೂ ಬಲಿಯಾಗುವ ಸಂಭವವಿರುತ್ತದೆ. ಆದ್ದರಿಂದ ಎಲ್ಲಾ ಮದ್ಯದ ಅಂಗಡಿಗಳಿಗೂ ಕಡ್ಡಾಯವಾಗಿ ಸೂಚನೆ ನೀಡಬೇಕು ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಸಂದೇಶ್, ಮರಿ ಜೋಸೆಫ್, ಮಲ್ಲೇಶ್ ಅಂಬುಗ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಲವು ಮದ್ಯದ ಅಂಗಡಿಗಳಲ್ಲಿ ಬೆಳಗ್ಗೆ ೭.೩೦ ಗಂಟೆಯಿಂದಲೇ ಮಾರಾಟ ಪ್ರಾರಂಭ ಮಾಡುತ್ತಾರೆ ಎಂದು ಆರೋಪಿಸಿದರು.ಈ ವೇಳೆ ಜಿಲ್ಲಾಧಿಕಾರಿಯವರು, ತನಿಖಾ ತಂಡವನ್ನು ನೇಮಿಸಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಹಾಗೂ ಅಂತಹ ಮದ್ಯ ಅಂಗಡಿಗಳಿಗೆ ದಂಡ ವಿಧಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಕಲೇಶಪುರ ಕಾಡು ವ್ಯಾಪ್ತಿಯಲ್ಲಿ ವಾಸವಿರುವ ಪರಿಶಿಷ್ಟ ಪಂಗಡದ ಹಕ್ಕಿಪಿಕ್ಕಿ ಜನಾಂಗದವರು, ಹಲಸರು, ಮಲೇರು ಜನಾಂಗದವರಿಗೆ ರಸ್ತೆ ಇನ್ನಿತರ ಸೌಲಭ್ಯಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಹಾಗೂ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಸಂತ್ರಸ್ತರ ಪುನರ್ ವಸತಿ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪೊಲೀಸ್ ಅಧಿಕಾರಿಗಳು, ಪಿಡಿಒಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿ ಸ್ಥಳೀಯ ಸಮುದಾಯದ ಮುಖಂಡರನ್ನು ಸೇರಿಸಿ ಅರಿವು ಕಾರ್ಯಕ್ರಮ ನಡೆಸಲು ಸೂಚಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಗಳನ್ನು ಕೊರೆದಿದ್ದು, ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಿಲ್ಲ ಎಂದು ಸಮಿತಿಯ ಸದಸ್ಯರು ಸಭೆ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಿತಿಯ ಸದಸ್ಯರಾದ ಶಿವಮ್ಮ, ಬೈರೇಶ್ ಶಿವಪ್ಪ ನಾಯಕ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಜಂಟಿ ಕೃಷಿ ನಿರ್ದೇಶಕರಾದ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಧೂದ್ ಫೀರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.