ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಕಲಿಕೆಯಲ್ಲಿ ಗುಣಾತ್ಮಕ ಸುಧಾರಣೆ ಮತ್ತು ಮಾದರಿ ಫಲಿತಾಂಶದ ಕುರಿತು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿಗಾಗಿ ಮಾನವೀಯತೆ ಮರೆತು ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಈ ಸಂಬಂಧ ಜಿಲ್ಲಾಡಳಿತ ಪ್ರತಿ ಶಾಲೆಗಳ ಮೇಲೆ ಕಣ್ಣಿಟ್ಚಿದೆ ಎಂದರು.
ಶಾಲಾ ದಾಖಲಾತಿಯ ಆರಂಭ, ಅಗತ್ಯ ದಾಖಲೆಗಳು, ದಾಖಲಾತಿಯ ಮುಕ್ತಾಯ, ಶುಲ್ಕ, ಸರ್ಕಾರದ ಮಾನದಂಡ, ಮತ್ತಿತರ ನಿಬಂಧನೆಗಳ ಕುರಿತು ಜನಸಾಮಾನ್ಯರಿಗೆ ಹಾಗೂ ಪೋಷಕರಿಗೆ ತಿಳಿಯುವಂತೆ ಶಾಲೆಯ ಪ್ರಕಟಣಾ ಫಲಕದಲ್ಲಿ ಮಾಹಿತಿಯನ್ನು ಬಿತ್ತರಿಸುವಂತೆ ಸೂಚಿಸಿದರು.ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದು, ಜನಜೀವನ ನಡೆಸುವುದು ದುಸ್ತರವಾಗಿರುವ ಈ ಸಂದರ್ಭದಲ್ಲಿ ಶಾಲಾ ದಾಖಲಾತಿಗಾಗಿ ಹೆಚ್ಚಿನ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ. ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಪಡೆದು ಮಕ್ಕಳ ದಾಖಲಾತಿ ಮಾಡಿಕೊಳ್ಳಬೇಕು. ಕೆಲವು ಸಂದರ್ಭದಲ್ಲಿ ಮಕ್ಕಳಿಗೆ ಶುಲ್ಕ ಪಾವತಿಸಲು ಕಷ್ಟಸಾಧ್ಯವಾದಲ್ಲಿ ಸುಲಭ ಕಂತಿನಲ್ಲಿ ಹಣ ಪಾವತಿಸಲು ಅವಕಾಶ ನೀಡಬೇಕು. ಒಟ್ಟಾರೆಯಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಜನಸ್ನೇಹಿಯಾಗಿ ವ್ಯವಹರಿಸುವಂತೆ ಸಲಹೆ ನೀಡಿದರು.
ಮುಂದಿನ ಸಾಲಿನ ಎಸ್ಎಸ್ಎಲ್.ಸಿ.ಪರೀಕ್ಷಾ ಫಲಿತಾಂಶ ಉತ್ತಮ ಶ್ರೇಣಿಯಲ್ಲಿದ್ದು, ಮುಂಚೂಣಿ ಹತ್ತರಲ್ಲಿ ಒಂದಾಗಿರುವಂತೆ ಶಿಕ್ಷಕರು ಗಮನಹರಿಸಬೇಕು. ಅದಕ್ಕಾಗಿ ಶಿಕ್ಷಕರು ಈಗಿನಿಂದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆಂಗ್ಲ, ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರು ವಿಶೇಷವಾಗಿ ಕಾಳಜಿ ವಹಿಸಬೇಕೆಂದ ಅವರು, ಎಲ್ಲಾ ಶಿಕ್ಷಕರು ತಮ್ಮ ಜವಾಬ್ದಾರಿ ಯರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದವರು ನುಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕರು ಮಾಡಿಕೊಂಡಿರುವ ಸಿದ್ಧತೆಗಳ, ಬೋಧನಾ ಕ್ರಮಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಖುದ್ದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಸೂಕ್ತ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಶಿಕ್ಷಕರ ಕ್ರಮವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅಲ್ಲದೇ ಅಂತಹ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸುಧಾರಣಾ ಕ್ರಮವಾಗಿ ದಕ್ಷ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.ನಾಗಾಲೋಟದಲ್ಲಿ ಓಡುತ್ತಿರುವ ವಿಶ್ವದ ವೇಗಕ್ಕೆ ನಮ್ಮ ಮಕ್ಕಳನ್ನು ಸಿದ್ಧಪಡಿಸುವುದು ಸವಾಲಿನ ಕೆಲಸ. ಎಲ್ಲಾ ಸೌಲಭ್ಯಗಳನ್ನು ಪಡೆದು, ಶಿಕ್ಷಣ ಪಡೆಯುತ್ತಿರುವ ನಗರದ ಮಕ್ಕಳ ಶೈಕ್ಷಣಿಕ ವೇಗಕ್ಕೆ ಯಾವುದೇ ಅತ್ಯಾಧುನಿಕ ಸೌಲಭ್ಯಗಳನ್ನು ಕಾಣದಿರುವ ಗ್ರಾಮೀಣ ಮಕ್ಕಳನ್ನು ಸಿದ್ಧಪಡಿಸಿ, ಮಕ್ಕಳಲ್ಲಿ ಸ್ಪರ್ಧಾತ್ಮಕ ಭಾವ ಬೆಳೆಸಲು ಶಿಕ್ಷಕರು ಮಾನವೀಯ ನೆಲೆಯಲ್ಲಿ ಪ್ರಾಮಾಣಕವಾಗಿ ಕಾರ್ಯನಿರ್ವಹಿಸಬೇಕು. ಇದು ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಸಿರುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ ಸೇರಿದಂತೆ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಉಪಸ್ಥಿತರಿದ್ದರು.