ಹುಬ್ಬಳ್ಳಿ:
ಜಾತಿ, ಮತ, ಧರ್ಮ ಆಧರಿತ ಭಾವನಾತ್ಮಕ ವಿಚಾರದೊಂದಿಗೆ ಬಿಜೆಪಿಯು ಯುವಕರನ್ನು ಪ್ರಚೋದಿಸಿದ ಪರಿಣಾಮ ಕಾಂಗ್ರೆಸ್‌ನ ಭದ್ರ ಬುನಾದಿಯಾಗಿದ್ದ ಹು-ಧಾ ಮಹಾನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾಗಿದೆ. ಹಾಗಾಗಿ, ಮತ್ತೆ ಇದರ ಪ್ರಾಬಲ್ಯ ಸಾಧಿಸಲು ಕಾರ್ಯಕರ್ತರು, ಪಕ್ಷದ ಮುಖಂಡರು ಶ್ರಮಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.ಇಲ್ಲಿಯ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜ್ಯ ಸರಕಾರ 16 ತಿಂಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವ ಜತೆಗೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಅವುಗಳನ್ನು ಪ್ರಚುರ ಪಡಿಸಿ ಪಕ್ಷ ಸಂಘಟನೆ ಕಾರ್ಯ ಮಾಡಬೇಕು. ಜನರಲ್ಲಿ ಭಾವನಾತ್ಮಕ ವಿಚಾರ ಬಿತ್ತುತ್ತಿರುವ ಬಿಜೆಪಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದರು.ಲೋಕಸಭಾ ಚುನಾವಣೆ ನಂತರ ತೆರವುಗೊಂಡ ರಾಜ್ಯದ 3 ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅ. 10ರೊಳಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲಿ ಆದರೂ ಶಿಗ್ಗಾಂವಿ-ಸವಣೂರು, ಸಂಡೂರು, ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣೆ ಎದುರಾಗಲಿದೆ. ಈ ಮೂರು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಲೇಬೇಕಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಆಯ್ಕೆ ಸಮಿತಿ ನಿಯೋಜಿಸಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.
ಕಾರ್ಯಕರ್ತರಿಗೆ ಪ್ರಾತಿನಿಧ್ಯ ಸಿಗಲಿಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳು ಉತ್ತರ ಕರ್ನಾಟಕವನ್ನು ಪ್ರತಿನಿಧಿಸುತ್ತವೆ. ಆದರೆ, ಪುನರ್ ವಿಂಗಡಣೆ ನಂತರ ಹು-ಧಾ ಮಹಾನಗರದಲ್ಲಿನ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ರಾಜಕೀಯ ಸೇರಿ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿಲ್ಲ. ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು ನೀಡುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ವಿಶಾಲ ಅಬ್ಬಯ್ಯ ಅವರಿಗೆ ನೇಮಕಾತಿ ಆದೇಶ ಹಸ್ತಾಂತರಿಸಿದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಎಸ್.ಎಫ್. ಜಕ್ಕಪ್ಪನವರ, ಅನ್ವರ ಮುಧೋಳ, ರಾಜಶೇಖರ ಮೆಣಸಿನಕಾಯಿ, ಪ್ರಕಾಶಗೌಡ ಪಾಟೀಲ, ಬಂಗಾರೇಶ ಹಿರೇಮಠ, ಮೋಹನ ಹಿರೇಮನಿ, ಮೋಹನ ಅಸುಂಡಿ, ಅಲ್ತಾಫ್ ಕಿತ್ತೂರ, ರಾಜಶೇಖರ ಕಮತಿ, ಆರೀಫ್ ಭದ್ರಾಪುರ, ಪ್ರೇಮನಾಥ ಚಿಕ್ಕತುಂಬಳ, ದೊಡ್ಡರಾಮಪ್ಪ ದೊಡ್ಡಮನಿ, ಶಾರೂಕ್ ಮುಲ್ಲಾ, ನವೀದ ಮುಲ್ಲಾ ಸೇರಿದಂತೆ ಇತರರು ಇದ್ದರು.