ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನಕ್ಕೆ ಚಿತ್ರನಟ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ ದತ್ತ ಮಹಾರಾಜರ ದರ್ಶನ ಪಡೆದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿರುವ ಪ್ರಸಿದ್ಧ ಹಾಗೂ ಹೆಚ್ಚು ಭಕ್ತರು ಬಂದು ಹೋಗುವ ಪುಣ್ಯಸ್ಥಳಗಳಲ್ಲಿ ಗಾಣಗಾಪೂರ ಕ್ಷೇತ್ರವು ಒಂದಾಗಿದೆ. ಇಲ್ಲಿಗೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ, ಕೆರಳ, ಗೋವಾ ಸೇರಿದಂತೆ ದೇಶದ ನಾನಾ ಮೂಲೆಗಳಿಂದ ಭಕ್ತರು ಬಂದು ಹೋಗುತ್ತಾರೆ. ನನಗೆ ಈ ದೇವಸ್ಥಾನ ವಯಕ್ತಿಕವಾಗಿ ಬಹಳ ಪವಿತ್ರವಾದ ಸ್ಥಳ. ಮನಸ್ಸಿಗೆ ದತ್ತ ಮಹಾರಾಜರನ್ನು ನೋಡಬೇಕೆನಿಸಿದಾಗಲೊಮ್ಮೆ ಇಲ್ಲಿಗೆ ಕುಟುಂಬ ಸಮೇತ ಬಂದು ಹೋಗುತ್ತೇನೆ. ನನ್ನ ಅಳಿಯ ಅಮೇರಿಕದಲ್ಲಿದ್ದು 6 ವರ್ಷಗಳಿಂದ ಭಾರತಕ್ಕೆ ಬಂದಿರಲಿಲ್ಲ. ಈಗ ದತ್ತನ ದರ್ಶನಕ್ಕಾಗಿ ಬಂದಿದ್ದಾನೆ ಎಂದ ಅವರು ಈ ವರ್ಷ ಉತ್ತಮ ಮಳೆಯಾಗುತ್ತಿದ್ದು ಎಲ್ಲರಿಗೂ ಒಳತಾಗಲಿ ಎಂದರು.
ಇನ್ನೂ ಗಾಣಗಾಪೂರ ಕ್ಷೇತ್ರ ಅಭಿವೃದ್ಧಿ ದೃಷ್ಟಿಯಿಂದ ಹಿಂದೆ ಬಿದ್ದಿದೆ, ಸರ್ಕಾರಗಳು ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿಲ್ಲ. ಇಂತಹ ಪುಣ್ಯಕ್ಷೇತ್ರ ಬೇರೆ ರಾಜ್ಯದಲ್ಲಿದ್ದರೆ ಇಷ್ಟೊತ್ತಿಗಾಗಲೇ ಬಹಳ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದರು. ಆದರೆ ನಮ್ಮ ರಾಜ್ಯದವರಿಗೆ ಅದ್ಯಾಕೋ ಗಾಣಗಾಪೂರದ ಮೇಲೆ ದೃಷ್ಟಿ ಬೀಳುತ್ತಿಲ್ಲ ಎಂದ ಅವರು ಗಾಣಗಾಪೂರ ಅಭಿವೃದ್ಧಿಯ ದೃಷ್ಟಿಯಿಂದ ದೇವಲ ಗಾಣಗಾಪೂರ ಅಭಿವೃದ್ಧಿ ಪ್ರಾಧಿಕಾರವಾದರೆ ಅನುಕೂಲವಾಗಲಿದೆ. ಈ ಕುರಿತು ಇಲ್ಲಿನ ಒಂದು ನಿಯೋಗ ಬೆಂಗಳೂರಿಗೆ ಬಂದರೆ ನಾನು ಅವರೊಂದಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಸಲು ಸಿದ್ಧನಿದ್ದೇನೆ ಎಂದರು. ಈ ಸಂದರ್ಭದಲ್ಲಿ ಜಗ್ಗೇಶ ಪತ್ನಿ ಪರಿಮಳ ಜಗ್ಗೇಶ ಹಾಗೂ ಕುಟುಂಬಸ್ಥರು ಇದ್ದರು.