22 ಕೆರೆಗಳ ಏತನೀರಾವರಿ ಯೋಜನೆ ವ್ಯಾಪ್ತಿಗೆ ಆಲೂರು ಮತ್ತು ಮೆಳ್ಳೆಕಟ್ಟೆ ಕೆರೆ ಸೇರಿಸುವಂತೆ ಒತ್ತಾಯಿಸಿ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯ 22 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮೆಳ್ಳೆಕಟ್ಟೆ ಮತ್ತು ಆಲೂರು ಕೆರೆಗಳನ್ನು ಸೇರಿಸಿ ಪೈಪ್‌ಲೈನ್ ಮೂಲಕ ಕೆರೆ ತುಬಿಸಬೇಕು ಎಂದು ಎರಡು ಗ್ರಾಮಸ್ಥರು ಶನಿವಾರ ರಾತ್ರಿ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು.ಬೇಸಿಗೆ ಕಾಲದಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತು ಅಡಿಕೆ ತೋಟಗಳಿಗೆ ನೀರುಣಿಸಲು ನೀರಿನ ಕೊರತೆ ಕಾಡುತ್ತಿದೆ. ಹೀಗಾಗಿ 22 ಕೆರೆಗಳ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಆಲೂರು ಮತ್ತು ಮೆಳ್ಳೆಕಟ್ಟೆ ಕೆರೆಗಳನ್ನು ಸೇರಿಸಿ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕೆಂದು ಶಾಸಕರಲ್ಲಿ ಕೋರಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ, 22 ಕೆರೆಗಳ ಏತ ನೀರಾವರಿ ಯೋಜನೆಯ ಕಳಪೆ ಕಾಮಗಾರಿಯಿಂದ ಈಗಾಗಲೇ ಈ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಪೈಪ್‌ಲೈನ್ ಮಾರ್ಗದಲ್ಲಿ ಅಲ್ಲಲ್ಲಿ ಪೈಪ್ ಹೊಡೆಯುತ್ತಿರುವುದರಿಂದ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಹೀಗಾಗಿ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸೇರಿ 22 ಕೆರೆಗಳ ಏತ ನೀರಾವರಿ ಯೋಜನೆಯ ಹೊಸ ಪೈಪ್‌ಲೈನ್ ಕಾಮಗಾರಿ ಕೈಗೊಂಡು ಈ ಭಾಗದ ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸಿ ರೈತರ ನೀರಿನ ಭವಣೆ ನೀಗಿಸಬೇ ಒತ್ತಾಯಿಸಿದ್ದೇವೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೂಡ ಸಾಕಾರಾತ್ಮಕವಾಗಿ ಸ್ಪಂದಿಸಿದ್ದು, ಹೊಸ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಆಲೂರು ಮತ್ತು ಮೆಳ್ಳೆಕಟ್ಟೆ ಕೆರೆಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಣ್ಣ, ಮಯಕೊಂಡ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಆಲೂರು ಸಿದ್ದೇಶ್, ಹನುಮಂತಣ್ಣ, ಸೋಮಣ್ಣ, ರೈತರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.