ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರೆ । ಸುಮಾರು 3500 ಯುವ ಮತದಾರರು ನೋಂದಣಿಗೆ ಬಾಕಿ
ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಇನ್ನೂ ಬಾಕಿ ಇರುವ ಅರ್ಹ ಯುವ ಮತದಾರರ ನೋಂದಣಿಯನ್ನು ಮಾಡಬೇಕು ಎಂದು ಮತದಾರರ ಪಟ್ಟಿ ವೀಕ್ಷಕ ಎಸ್.ಆರ್.ಉಮಾಶಂಕರ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2024ಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತದೆ. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವಹಿಸುತ್ತವೆ. ರಾಜಕೀಯ ಪಕ್ಷಗಳ ತೊಡಗಿಕೊಳ್ಳುವಿಕೆ, ಅವರು ನೀಡುವ ಸಲಹೆ ಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚೆನ್ನಾಗಿ ಆಗಿದೆ. ಸ್ವೀಪ್ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗಿದೆ. ಆದರೆ, 18, 19 ವರ್ಷದ ಯುವ ಮತದಾರರ ನೋಂದಣಿ ಸ್ವಲ್ಪ ಬಾಕಿ ಇದೆ. ಇನ್ನೂ 3 ರಿಂದ 4 ಸಾವಿರ ಯುವ ಮತದಾರರ ನೋಂದಣಿ ಬಾಕಿ ಇದ್ದು, ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನೋಂದಣಿ ಆಗಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಪ್ರಸಕ್ತ ಪರಿಷ್ಕರಣೆ ವೇಳೆ ಸುಮಾರು 27 ಸಾವಿರ ಯುವ ಮತದಾರರು ನೋಂದಣಿಯಾಗಿದ್ದು, ಇನ್ನು 3000 ದಿಂದ 3500 ಯುವ ಮತದಾರರು ನೋಂದಣಿಗೆ ಬಾಕಿ ಇದೆ. ಕಳೆದ ವಾರದಲ್ಲೇ 5527 ಯುವ ಮತದಾರರ ಸೇರ್ಪಡೆ ಆಗಿದೆ. 32 ಸಾವಿರ ಎಪಿಕ್ ಕಾರ್ಡ್‍ಗಳು ಅಂಚೆ ವಿಳಾಸಕ್ಕೆ ರವಾನೆಯಾಗಿದೆ. ಹೊಸದಾಗಿ ಅರ್ಜಿ ಹಾಕಿದವರದ್ದು ಜನೇವರಿ 1ರಿಂದ ರವಾನೆಯಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 7 ಮತ ಕ್ಷೇತ್ರಗಳು, 1793 ಮತಗಟ್ಟೆಗಳಿದ್ದು, 2024ರ ಜನೇವರಿ 05ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಪ್ರಸ್ತುತ ಮತದಾರರ ಪಟ್ಟಿಯಲ್ಲಿ 7,28,661 ಪುರುಷ, 7,44,779 ಮಹಿಳೆ ಸೇರಿದಂತೆ ಒಟ್ಟು 14,73,440 ಮತದಾರರು ಇದ್ದಾರೆ ಎಂದು ತಿಳಿಸಿದರು.
- - -
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತದಾರರ ಪಟ್ಟಿ ವೀಕ್ಷಕ ಎಸ್.ಆರ್. ಉಮಾಶಂಕರ್ ಮಾತನಾಡಿದರು.