ನದಿ ಒಡಲು ಸೇರುತ್ತಿರುವ ವಸತಿ ಸಮುಚ್ಚಯ ತ್ಯಾಜ್ಯ । ಚೀಲದಲ್ಲಿ ತರುವ ಕಸ ನದಿಗೆ
ಇದನ್ನು ಈವರೆಗೆ ತಡೆಗಟ್ಟಲು ಯಾವುದೇ ಪರಿಣಾಮಕಾರಿ ಕ್ರಮ ಜರಗದೇ ಇರುವುದರಿಂದ ನದಿಯ ಒಡಲು ನಿತರಮ್ತರ ಮಲೀನವಾಗುತ್ತಲೇ ಇದೆ . ಸಾಲದೆಂಬಂತೆ ಮನೆಯಲ್ಲಿ ಶೇಖರಣೆಯಾಗುವ ಪ್ಲಾಸಿಕ್ ಸೇರಿದಂತೆ ಘನ ತ್ಯಾಜ್ಯ, ಹಸಿ ತ್ಯಾಜ್ಯ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಂದು ಕೆಲವರು ತಂದು ಸೇತುವೆಯ ಮೇಲೆ ನಿಂತು ನೇರ ಎಸೆಯುತ್ತಿರುವುದು ನದಿಯನ್ನು ಅಕ್ಷರಶಃ ಡಂಪಿಂಗ್ ಯಾರ್ಡ್ ಎಂಬಂತೆ ಪರಿಗಣಿಸಿದಂತಿದೆ. ಉಪ್ಪಿನಂಗಡಿಯಲ್ಲಿ ಚರಂಡಿಗಳೆಲ್ಲಾ ಮುಖ ಮಾಡಿರುವುದು ನದಿಯ ಕಡೆಗೆ. ಆದ್ದರಿಂದ ಕೂಟೇಲು ಬಳಿಯಿಂದ ಹಿಡಿದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದವರೆಗೆ ಹೆಚ್ಚಿನ ಕಡೆ ಶೌಚ ನೀರು, ಮಲೀನ ನೀರೆಲ್ಲಾ ನೇತ್ರಾವತಿ ನದಿ ಗರ್ಭವನ್ನೇ ಸೇರಿ ಜೀವ ಜಲದೊಂದಿಗೆ ವಿಲೀನಗೊಳ್ಳುತ್ತದೆ. ವಸತಿ ಸಮುಚ್ಛಯ, ವಾಣಿಜ್ಯ ಸಂಕೀರ್ಣ, ಹೊಟೇಲ್, ರೆಸ್ಟೋರೆಂಟ್ ಹೀಗೆ ಎಲ್ಲದಕ್ಕೂ ಇಂಗುಗುಂಡಿ ಇದ್ದರೆ ಮಾತ್ರ ಪರವಾನಿಗೆ ನೀಡಬೇಕೆಂಬ ನಿಯಮವಿದ್ದರೂ, ನದಿ ಪಾತ್ರದ ಉಪ್ಪಿನಂಗಡಿಯಲ್ಲಿ ಹೆಚ್ಚಿನ ಕಡೆ ನಿರ್ಮಿಸಲಾದ ಇಂಗು ಗುಂಡಿ ಒಂದು ಮಳೆಗಾಲದಲ್ಲಿಯೇ ತುಂಬಿ ಹರಿಯುತ್ತಿರುತ್ತದೆ. ಸಾಲದಕ್ಕೆ ಇದೀಗ ಅಣೆಕಟ್ಟಿನ ಹಿನ್ನೀರು ನದಿಯಲ್ಲಿ ತುಂಬಿರುವುದರಿಂದ ಅಂತರ್ಜಲ ವೃದ್ಧಿಯಾಗಿ ಇಂಗುಗುಂಡಿಗಳು ವ್ಯರ್ಥವಾಗುತ್ತಿದೆ.
ವರ್ಷದ ೩೬೫ ದಿನವೂ ಇಲ್ಲಿ ಮಲೀನ ನೀರು ಹಾಗೂ ತ್ಯಾಜ್ಯಗಳು ನದಿಗಳನ್ನು ಸೇರುತ್ತಿದ್ದರೂ, ಹರಿಯುವ ನೀರಿನಲ್ಲಿ ಅದು ಕೂಡಾ ಹರಿದು ಹೋಗುತ್ತಿತ್ತು. ಆದರೆ ಈಗ ಅಣೆಕಟ್ಟಿನಿಂದಾಗಿ ಶೇಖರಣೆಗೊಂಡಿರುವ ಹಿನ್ನೀರಿನಲ್ಲಿ ಮಲಿನತೆಯ ಪ್ರಭಾವ ಜಾಸ್ತಿಯಾಗಿದೆ. ಈಗ ಹಿನ್ನೀರಿನಲ್ಲಿ ಪ್ಲಾಸ್ಟಿಕ್‌ಗಳು ಸೇರಿದಂತೆ ಇನ್ನಿತರ ತ್ಯಾಜ್ಯಗಳು ಹಿನ್ನೀರಿನಲ್ಲಿ ತೇಲುತ್ತಿವೆ. ಇನ್ನು ಮಲೀನ ನೀರು ಕೂಡಾ ಇದರೊಳಗೆ ದಿನಾ ಸೇರುವುದರಿಂದ ದಿನೇ ದಿನೇ ನೀರು ಕಪ್ಪಡರತೊಡಗುತ್ತದೆಯಲ್ಲದೆ, ದುರ್ವಾಸನೆಗೂ ಕಾರಣವಾಗುತ್ತದೆ.ಉಪ್ಪಿನಂಗಡಿ ಪ.ಪಂ. ಆಗದೇ ಇರುವುದರಿಂದ ಇಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಆದರೆ ನದಿಯಲ್ಲಿ ಹಿನ್ನೀರು ಸಂಗ್ರಹವಾಗುತ್ತಿರುವುದರಿಂದ ಉಂಟಾಗಿರುವ ಸೂಕ್ಷ್ಮ ಸ್ಥಿತಿಯಲ್ಲಿ ಪೇಟೆಯ ತ್ಯಾಜ್ಯವೂ ನದಿಯನ್ನು ನೇರವಾಗಿ ಸೇರದಂತೆ ಕ್ರಮ ಕೈಗೊಳ್ಳಬೇಕಾಗಿದೆ. ನದಿಯಲ್ಲಿ ಹಿನ್ನೀರು ಸಂಗ್ರಹವಾಗುತ್ತಿರುವುದರಿಂದ ಅಂತರ್ಜಲ ವೃದ್ಧಿಯಾಗಿ ಹಲವಾರು ಮನೆಗಳ ಶೌಚಾಲಯದಲ್ಲಿಯೂ ಅಂತರ್ಜಲ ತುಂಬಿ ಸಮಸ್ಯೆಗಳಾಗುತ್ತಿದೆ. ಈ ನಿಟ್ಟಿನಲ್ಲಿಯೂ ಪರಿಣಾಮಕಾರಿ ಕ್ರಮ ಆಡಳಿತ ವ್ಯವಸ್ಥೆಯಿಂದ ಜರಗಿಸಬೇಕಾಗಿದೆ.
-ಸ್ವರ್ಣೇಶ್ ಗಾಣಿಗ, ಸಾಮಾಜಿಕ ಕಾರ್ಯಕರ್ತ.