ಗದಗ: ಗದಗ ಜಿಲ್ಲೆಯಲ್ಲಿ ಕ್ರೀಡಾಭ್ಯಾಸ ಮಾಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾ ಸಾಧನೆ ಮಾಡಬೇಕು ಎಂದು ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲೆಯಲ್ಲಿ ಕ್ರೀಡಾ ಅಭ್ಯಾಸಕ್ಕಾಗಿ ಹಾಕಿ ಕ್ರೀಡಾಂಗಣ, ಈಜು ಕೋಳ, ಸುಸಜ್ಜಿತ ಕ್ರೀಡಾಂಗಣದಂತಹ ಸೌಕರ್ಯ ಒದಗಿಸಿದೆ. ಜತೆಗೆ ಮಕ್ಕಳಿಗೆ ಉತ್ತಮ ತರಬೇತುದಾರರನ್ನು ನೀಡಿ, ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇವುಗಳನ್ನು ಮಕ್ಕಳು ಉಪಯೋಗಿಸಿಕೊಂಡು ಸಾಧನೆ ಮಾಡಲು ಮುಂದೆ ಬರಬೇಕು.
ಜಿಲ್ಲೆಯಲ್ಲಿರುವ ಈಜುಕೊಳಗಳು ಕಳೆದ ಬೇಸಿಗೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಬೇಸಿಗೆ ಝಳವನ್ನು ತಣಿಸಿವೆ. ಇವುಗಳಿಂದ ₹70 ಸಾವಿರ ಮೊತ್ತವೂ ಬಂದಿದೆ ಎಂದ ಅವರು, ಮೂಲಭೂತ ಸೌಕರ್ಯಗಳನ್ನು ನಾವು ನೀಡಲು ಬದ್ಧ, ಅವುಗಳ ಸರಿಯಾದ ಸದ್ಭಳಕೆ ನಿಮ್ಮದಾಗಲಿ ಎಂದರು.ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರ ಅತಿಥಿಯಾಗಿ ಪಾಲ್ಗೊಂಡು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಓದಿನಲ್ಲಿ ಇರುವ ಆಸಕ್ತಿ ಕ್ರೀಡೆಯಲ್ಲಿ ಕಾಣುತ್ತಿಲ್ಲ. ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗೆ ಆಸಕ್ತಿ ನೀಡುವ ಮೂಲಕ ದೈಹಿಕ ಮಾನಸಿಕ ನೆಮ್ಮದಿ ನಿಮ್ಮದಾಗಿಸಿಕೊಳ್ಳಿ.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಜಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಗದಗ ತಾಲೂಕ ಮಟ್ಟದ ''ಬಿ'' ಗ್ರೂಪ್ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.