ಕನ್ನಡಪ್ರಭ ವಾರ್ತೆ ಮದ್ದೂರು
ಸಮಾಜದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಪತ್ರಕರ್ತರು ತಮ್ಮ ಸ್ಥಾನಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕು ಎಂದು ಶಾಸಕ ಕೆ.ಎಂ.ಉದಯ್ ಕಿವಿಮಾತು ಹೇಳಿದರು.ಪಟ್ಟಣದ ಶಿವಪುರ ವೆಂಕಟೇಶ್ವರ ರೆಸಿಡೆನ್ಸಿ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ದಿನನಿತ್ಯ ಆಗು ಹೋಗುವ ವಿಚಾರಗಳನ್ನು ನಿರಂತರವಾಗಿ ತಿಳಿಸುವ ಮಹಾನ್ ಕಾರ್ಯ ಮಾಡುವಾಗ ಪತ್ರಕರ್ತರು ತಮ್ಮತನವನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಪತ್ರಕರ್ತರಿಗೆ ಒಳ್ಳೆಯ ಗೌರವ, ಸ್ಥಾನಮಾನವಿದೆ. ಕಾಲ, ಜನ ಬದಲಾದಂತೆ ಪತ್ರಕರ್ತರು, ಮಾಧ್ಯಮದವರು ಬದಲಾವಗುವುದು ಬೇಡ. ಯಾರನ್ನು ಮೆಚ್ಚಿಸಲು ಅಥವಾ ಗುರಿಯಾಗಿಸಿಕೊಂಡು ಸುದ್ಧಿ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.ಇತ್ತೀಚೆಗೆ ಕೆಲವರು ಸಣ್ಣ ವಿಚಾರ, ಸಣ್ಣ ಹುಳುಕನ್ನು ದೊಡ್ಡದಾಗಿ ಮಾಡುವುದು, ಬಿಂಬಿಸುವುದು, ಜನರಿಗೆ ಅಗತ್ಯವಿರುವ ಒಳ್ಳೆಯ ಕೆಲಸ ಮಾಡಿದರೆ ಅದನ್ನು ತಲುಪಿಸುವ ಕೆಲಸ ಮಾಡುತ್ತಿಲ್ಲ. ಇಂತಹ ತಾರತಮ್ಯವನ್ನು ಸರಿಪಡಿಸಿಕೊಂಡು ಸಮಾಜದಲ್ಲಿ ನಿಮಗೆ ಇರುವ ಗೌರವ ಕಾಪಾಡಿಕೊಂಡು, ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು, ತಮ್ಮ ಸ್ಥಾನಕ್ಕೆ ಚ್ಯುತಿಬಾರದಂತೆ ಕೆಲಸ ಮಾಡಿದರೆ ದೊಡ್ಡದಾಗಿ ಬೆಳೆಯಬಹುದು ಎಂದರು.
ನಾನು ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದವನಲ್ಲ. ಕೋವಿಡ್ ವೇಳೆ ತಾಲೂಕಿನಲ್ಲಿ ಬಡವರು, ಹಿಂದುಳಿದವರು, ನಿರ್ಗತಿಕರಿಗೆ ಮಾಡಿದ ಸೇವೆಯನ್ನು ನೋಡಿ ಕ್ಷೇತ್ರದ ಜನರು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಶಕ್ತಿ ಮೀರಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ತಾಲೂಕು ಪತ್ರಕರ್ತರ ಸಂಘಕ್ಕೆ ನಿವೇಶನ ಕೋರಿ ಪದಾಧಿಕಾರಿಗಳು, ಸದಸ್ಯರು ಮನವಿ ಸಲ್ಲಿಸಿದ್ದಾರೆ. ನಿವೇಶನ ಒದಗಿಸಲು, ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ ನಿಮ್ಮ ಜೊತೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತೀಕೆರೆ ಜಯರಾಮ್ ಮಾತನಾಡಿ, ಜಿಲ್ಲೆಯ ಪತ್ರಕರ್ತರ ಸಂಕಷ್ಟಕ್ಕೆ ನೆರವಾಗಲು ಕ್ಷೇಮನಿಧಿ ಸ್ಥಾಪಿಸಿದ್ದು, ಈಗ ಲಕ್ಷಾಂತರ ರು. ಸಂಗ್ರಹವಾಗಿದೆ. ಎಲ್ಲಾ ತಾಲೂಕು ಸಂಘಗಳಲ್ಲಿಯೂ ಕ್ಷೇಮನಿಧಿ ಸ್ಥಾಪನೆಯಾಗಬೇಕಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದರು.ಇದೇ ವೇಳೆ ಪತ್ರಿಕಾ ವಿತರಕರಾದ ವಿ.ಎಸ್.ಪ್ರಭು, ಪ್ರಮೋದ್ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವರ್ಷಿಣಿ, ಎಸ್ .ಪಂಚಮಿ, ಅಮೋಘ ಶೆಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಶಿವನಂಜಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಘದ ಅಧ್ಯಕ್ಷ ಎಸ್ .ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ , ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್ , ರಾಜ್ಯ ಸಮಿತಿ ಸದಸ್ಯ ಸಿ.ಎನ್ .ಮಂಜುನಾಥ್ , ರಾಷ್ಟ್ರೀಯ ಸಮಿತಿ ಸದಸ್ಯ ಜೆ.ಎಂ.ಬಾಲಕೃಷ್ಣ, ಜಿಲ್ಲಾ ಖಜಾಂಚಿ ಆನಂದ, ಜಿಲ್ಲಾ ಉಪಾಧ್ಯಕ್ಷರಾದ ರವಿ ಸಾವಂದಿಪುರ, ಗಣಂಗೂರು ನಂಜೇಗೌಡ, ಜಿಲ್ಲಾ ಕಾರ್ಯದರ್ಶಿ ಚಿನಕುರಳಿ ಲೋಕೇಶ್ , ನಿರ್ದೇಶಕ ಅಣ್ಣೂರು ಸತೀಶ್ , ತಾಲೂಕು ಪ್ರಧಾನ ಕಾರ್ಯದರ್ಶಿ ಪಿ.ನಂದೀಶ್, ಉಪಾಧ್ಯಕ್ಷ ಎಂ.ಆರ್ .ಚಕ್ರಪಾಣಿ, ಖಜಾಂಚಿ, ವಿ.ಎಸ್ .ಪ್ರಭು ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.