ಭೋವಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork | Published : Jul 21, 2024 1:20 AM

ಸಾರಾಂಶ

ಚಿತ್ರದುರ್ಗದಲ್ಲಿ ಆಯೋಜಿಸಲಾದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ದೀಕ್ಷಾ ರಜತ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀಗಳಿಗೆ ಪುಷ್ಪವೃಷ್ಟಿಗೈದು ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭೋವಿ ಅಭಿವೃದ್ಧಿ ನಿಗಮವ ಭೋವಿ ವಡ್ಡರ ಅಭಿವೃದ್ಧಿ ನಿಗಮವಾಗಿ ಹೆಸರು ಬದಲಾಯಿಸಿ ಹೆಚ್ಚುವರಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಚಿತ್ರದುರ್ಗ ಭೋವಿ ಗುರುಪೀಠದಲ್ಲಿ ಶನಿವಾರ ಆಯೋಜಿಸಿದ್ದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ದೀಕ್ಷಾ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾನೂನು ರೀತಿ ಸಾಧ್ಯವಿರುವುದ ಎಲ್ಲವನ್ನೂ ಮಾಡಿಕೊಡುತ್ತೇನೆ. ಸಾಮಾಜಿಕವಾಗಿ ಹಾಗೂ ಕಾನೂನು ರೀತಿ ಹಿಂದೇಟು ಹಾಕುವುದಿಲ್ಲ. ನನ್ನ ಹೆಸರು ಸಿದ್ದರಾಮ, ಮನೆ ದೇವರು ಸಿದ್ದರಾಮ, ಭೋವಿ ಗುರುಪೀಠದ ಶ್ರೀಗಳ ಹೆಸರು ಇಮ್ಮಡಿ ಸಿದ್ದರಾಮೇಶ್ವರ. ಭೋವಿ ಸಮಾಜಕ್ಕೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ನಿಗಮ ಮಾಡಿಕೊಟ್ಟಿದೆ. ಕೆಪಿಎಸ್‌ಸಿ ಸಂದಸ್ಯರ ನೇಮಕ ಮಾಡಿದೆ ಎಂದರು.

ಭೋವಿ ಸಮಾಜದಲ್ಲಿ ಬಹಳಷ್ಟು ಜನ ಅವಿದ್ಯಾವಂತರಿದ್ದಾರೆ. ಕಸುಬಿನಿಂದ ವಿದ್ಯಾವಂತರಾಗಲು ಸಾಧ್ಯವಾಗಿಲ್ಲ. ದಲಿತ, ಹಿಂದುಳಿದ ವರ್ಗಕ್ಕೆ ಸೇರಿದ ಅನೇಕ ಜನರು ವಿದ್ಯಾವಂತರಾಗಲು ಸಾಧ್ಯವಾಗಿಲ್ಲ. ಶಿಕ್ಷಣ ಮಾತ್ರ ಶೋಷಿತ ಸಮುದಾಯಗಳಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿ ತುಂಬ ಬಲ್ಲದು.

ಇಂದು ಎಲ್ಲರಿಗೂ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯಗಳ ಕಲ್ಪಿಸಲಾಗಿದೆ. ಶಿಕ್ಷಣ ಮೂಲಭೂತ ಹಕ್ಕಾಗಿದೆ. ಇಷ್ಟಾದರೂ ಸ್ವಾತಂತ್ರ್ಯ ಬಂದು 77 ವರ್ಷಗಳಲ್ಲಿ ಇನ್ನೂ ಕೂಡಾ 75 ಪರ್ಸೆಂಟ್ ಅಷ್ಟೇ ಸಾಕ್ಷರರಾಗಲು ಸಾಧ್ಯವಾಗಿದೆ. 25 ಪರ್ಸೆಂಟ್ ಜನ ಅವಿದ್ಯಾವಂತರು ಎಂದರು.

ಭೋವಿ ಸಮಾಜ ಪರಿಶಿಷ್ಟರಲ್ಲಿ ಬರಲಿದ್ದು 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಶೋಷಿತರಲ್ಲಿ ಸಾಮಾಜಿಕ, ಆರ್ಥಿಕ ಶಕ್ತಿ ತುಂಬಲು ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿಗೆ ತಂದೆವು. ಈ ವರ್ಷ ಈ ಕಾಯ್ದೆಯಡಿ ₹39,121 ಕೋಟಿ ಹಣವನ್ನು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲು ಇಟ್ಟಿದ್ದೇವೆ. ರಾಜ್ಯದ ಅಭಿವೃದ್ಧಿಗೆ ₹1 ಲಕ್ಷ 60 ಸಾವಿರ ಕೋಟಿ ಖರ್ಚು ಮಾಡಿದರೆ, ಪರಿಶಿಷ್ಟ ಜಾತಿ ವರ್ಗದವರಿಗೆ 24.1 ಪರ್ಸೆಂಟ್ ಮೀಸಲಿಡಬೇಕು ಎಂದರು.

ಶೋಷಿತ ಸಮಾಜಕ್ಕೆ ಗುರಿ ಹಾಗೂ ಮಾರ್ಗದರ್ಶನ ಬೇಕು. ಗುರಿ ಅಂದರೆ ಬಸವಾದಿಶರಣರು, ಅಂಬೇಡ್ಕರ್ ಹೇಳಿದಂತೆ ಅದು ಸಮ ಸಮಾಜ ನಿರ್ಮಾಣ ನೆಲೆ. ಅವಕಾಶ ವಂಚಿತ ಜನರು ಮುಖ್ಯವಾಹಿನಿಗೆ ಬರಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣ ಸಾಧ್ಯ. ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಅನ್ಯಾಯ, ತುಳಿತ, ಶೋಷಣೆಗೆ ಒಳಗಾದ ದುರ್ಬಲರಿಗೆ ಸಾಮಾಜಿಕ, ಆರ್ಥಿಕ ಶಕ್ತಿ ಬಂದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು ಇದನ್ನು ಮರೆಯಬಾರದೆಂದರು.

ನಾವೆಲ್ಲರೂ ಮನುಷ್ಯರು, ಸಮಾನವಾಗಿರಬೇಕು. ಮೇಲು, ಕೀಳು, ಬಡವ ಬಲ್ಲಿದ, ಅಕ್ಷರಸ್ಥ, ಅನಕ್ಷರಸ್ಥ ಅಂತ ತಾರತಮ್ಯ ಇರಬಾರದು. ಇದಿದ್ದರೆ ಅಸಮಾನತೆ ಸಮಾಜ ಎನ್ನುತ್ತೇವೆ. ಈ ಅಸಮಾನತೆ ಹೋದರೆ ಮಾತ್ರ ಸಮಾನತೆ ಸಮಾಜ ನಿರ್ಮಾಣ ಸಾಧ್ಯ. ಅನೇಕ ಕಾರಣಕ್ಕೆ ಅಸಮಾನತೆ ನಿರ್ಮಾಣವಾಗಿದೆ. ಅದಕ್ಕೆ ಸ್ವಾರ್ಥಿಗಳು, ಪಟ್ಟಭದ್ರ ಹಿತಾಸಕ್ತಿಗಳು ಕಾರಣ. ಎಲ್ಲಿವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿವರೆಗೆ ಅಸಮಾನತೆ ಇರುತ್ತದೆ. ಜಾತಿ ವ್ಯವಸ್ಥೆ ಕಾರಣಕ್ಕೆ ಬಹಳಷ್ಟು ಸಮುದಾಯಗಳು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಯಾರಿಗೆ ವಿದ್ಯೆ ಕಲಿಯುವ ಅವಕಾಶ ಸಿಕ್ಕಿತೋ ಆರ್ಥಿಕ, ಸಾಮಾಜಿಕವಾಗಿ ಮೇಲೆ ಬಂದರು. ಅವಕಾಶ ವಂಚಿತರು ಕಸುಬುಗಳ ಮಾಡಿಕೊಂಡು ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ.

ಭೋವಿ ಸಮಾಜದಲ್ಲಿ ಹುಟ್ಟಿದವರು ಐಎಎಸ್, ಐಪಿಎಸ್ ಆಗಲು ಅರ್ಹರು. ಇಲ್ಲದಿದ್ದರೆ ಅಂಬೇಡ್ಕರ್ ಮೇಧಾವಿ ಆಗಲು ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನಿಸಿದ ಸಿಎಂ ಅವಕಾಶ ಸಿಕ್ಕವರು ಮೇಲಕ್ಕೆ ಬಂದರು, ವಂಚಿತರು ಕೆಳಗಡೆ ಹೋದರು. ಮನುಷ್ಯರಾಗಿ ಬಾಳುವ ವ್ಯವಸ್ಥೆ ನಿರ್ಮಾಣ ಮಾಡಿಕೊಳ್ಳಬೇಕು. ಸ್ವಾಭಿಮಾನದಿಂದ ಬದುಕಬೇಕು. ಶತ ಶತಮಾನಗಳ ಕಾಲ ನಮ್ಮಲ್ಲಿ ದಾಸ್ಯ ಪದ್ಧತಿ ಇದ್ದುದರಿಂದ ಗುಲಾಮಗಿರಿಯಿಂದ ಹೊರ ಬರಲು ಸಾಧ್ಯವಾಗಿಲ್ಲವೆಂದು ಸಿದ್ದರಾಮಯ್ಯ ಹೇಳಿದರು.

ಒಬ್ಬ ಮೇಲ್ಜಾತಿ ಬಡವ ಬಂದರೆ ಸ್ವಾಮಿ, ಬುದ್ದಿ ಅಂತೀವಿ. ತಳ ಸಮುದಾಯದ ಶ್ರೀಮಂತನಾಗಿದ್ದರೂ ಏನೂ ಅನ್ನೋಲ್ಲ. ಇದೇ ಗುಲಾಮಗಿರಿ ಮನಸ್ಥಿತಿ. ಇದು ಬದಲಾವಣೆ ಆಗಬೇಕಾದರೆ ನಾವೆಲ್ಲರೂ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ವಿದ್ಯಾವಂತರಾಗಬೇಕು.ಇಮ್ಮಡಿ ಶ್ರೀ ಪೀಠಾಧಿಪತಿಯಾದ ನಂತರ ನಿರಂತರವಾಗಿ ಶಿಕ್ಷಣ, ಸಂಘಟನೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಂತ್ರಾಲಯದ ಸುಬುದೇಂದ್ರ ತೀರ್ಥ ಸ್ವಾಮೀಜಿ, ಸಚಿವರುಗಳಾದ ಶಿವರಾಜ ತಂಗಡಗಿ, ಡಿ.ಸುಧಾಕರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕರಾದ ವೀರೇಂದ್ರ ಪಪ್ಪಿ, ಎಂ.ಚಂದ್ರಪ್ಪ, ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷರಸ ಮಂಡಳಿ ಅಧ್ಯಕ್ಷ ಯೋಗೀಶ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article