ಹೆಚ್ಚುವರಿ ಕಂತು ವಸೂಲಿ: ಬ್ಯಾಂಕ್‌ಗೆ ಆಯೋಗ ದಂಡ

KannadaprabhaNewsNetwork | Published : Mar 6, 2025 12:34 AM

ಸಾರಾಂಶ

ಮನೆ ಅಡಮಾನ ಸಾಲ ಪಡೆದಿದ್ದ ಗ್ರಾಹಕರಿಂದ ಹೆಚ್ಚುವರಿ ಕಂತು ವಸೂಲಿ ಮಾಡಿದ್ದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್‌ಗೆ ಜಿಲ್ಲಾ ಗ್ರಾಹಕರ ಆಯೋಗವು ಹೆಚ್ಚುವರಿಯಾಗಿ ಕಟ್ಟಿಸಿಕೊಂಡಿದ್ದ ₹68,340 ವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ, ₹25 ಸಾವಿರ ಪರಿಹಾರ ಹಾಗೂ ದೂರು ವೆಚ್ಚ ₹5 ಸಾವಿರ ನೀಡುವಂತೆ ಆದೇಶಿಸಿದೆ.

ದಾವಣಗೆರೆ: ಮನೆ ಅಡಮಾನ ಸಾಲ ಪಡೆದಿದ್ದ ಗ್ರಾಹಕರಿಂದ ಹೆಚ್ಚುವರಿ ಕಂತು ವಸೂಲಿ ಮಾಡಿದ್ದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್‌ಗೆ ಜಿಲ್ಲಾ ಗ್ರಾಹಕರ ಆಯೋಗವು ಹೆಚ್ಚುವರಿಯಾಗಿ ಕಟ್ಟಿಸಿಕೊಂಡಿದ್ದ ₹68,340 ವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ, ₹25 ಸಾವಿರ ಪರಿಹಾರ ಹಾಗೂ ದೂರು ವೆಚ್ಚ ₹5 ಸಾವಿರ ನೀಡುವಂತೆ ಆದೇಶಿಸಿದೆ.

ತಾಲೂಕಿನ ನಾಗನೂರು ಗ್ರಾಮದ ರೇಖಾ ಚಂದ್ರಶೇಖರಪ್ಪ 25.2.2019ರಂದು ಮನೆ ಅಡಮಾನದ ₹4.04 ಲಕ್ಷ ಸಾಲವನ್ನು ಬ್ಯಾಂಕ್ ಅಸಲು ಮತ್ತು ಬಡ್ಡಿ ಸೇರಿಸಿ, ಮಾಸಿಕ ₹11,390 ದಂತೆ 60 ಸಮ ಕಂತುಗಳಲ್ಲಿ ಮರು ಪಾವತಿಸುವಂತೆ ಸಾಲ ಮಂಜೂರು ಮಾಡಿತ್ತು. ಕೋವಿಡ್ ಹಾವಳಿ ವೇಳೆ ಆರ್ಥಿಕ ತೊಂದರೆಯಿಂದ 4 ಕಂತು ಪಾವತಿಸಿರಲಿಲ್ಲ. ಆಗ ಆರ್‌ಬಿಐ ಕೋವಿಡ್ ಅವಧಿಯಲ್ಲಿ ಸಾಲದ ಕಂತು ತುಂಬುವಂತೆ ಒತ್ತಾಯಿಸುವಂತಿಲ್ಲ, ಬಾಕಿ ಕಂತುಗಳನ್ನು ನಂತರ ಕಟ್ಟಿಸಿಕೊಳ್ಳಬೇಕೆಂದು ಹೊರಡಿಸಿದ್ದ ಮಾರ್ಗಸೂಚಿ ಲಾಭ ಪಡೆದ ಗ್ರಾಹಕರು, ನಂತರ ಬಾಕಿ ಕಂತುಗಳನ್ನು ಸೇರಿ, ಒಟ್ಟು 60 ಕಂತುಗಳನ್ನು ಕಟ್ಟಿ, ಸಾಲ ಪೂರ್ಣಗೊಳಿಸಿದ್ದರು.

ಆದರೆ, ಬ್ಯಾಂಕ್‌ನವರು ಮತ್ತೆ ಹೆಚ್ಚುವರಿಯಾಗಿ 6 ಕಂತುಗಳನ್ನು ವಸೂಲು ಮಾಡಿದ್ದಲ್ಲದೇ, ಇನ್ನೂ ಬಾಕಿ ಇದೆಯೆಂದು ಕಂತುಗಳನ್ನು ಕಟ್ಟುವಂತೆ ಗ್ರಾಹಕಿ ರೇಖಾ ಅವರಿಗೆ ನೋಟಿಸ್‌ ಕಳಿಸಿದ್ದರು. ಪದೇಪದೇ ಮನೆ ಬಳಿ ಹೋಗಿ, ಕಂತು ತುಂಬುವಂತೆ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರೇಖಾ ವಕೀಲರ ಮೂಲಕ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಗ್ರಾಹಕರು ಹೆಚ್ಚುವರಿಯಾಗಿ ಕಟ್ಟಿಸಿಕೊಂಡ ₹68,340 ಬಡ್ಡಿ ಸಮೇತ ಹಿಂದಿರುಗಿಸಲು ಹಾಗೂ ಅಡಮಾನ ಪತ್ರದ ರಿ ಕನ್ವಯೆನ್ಸ್‌ ಡೀಡ್‌ ಮಾಡಿಕೊಡುವಂತೆ ಆದೇಶಿಸಿತ್ತು.

ಸಾಕ್ಷಿ, ದಾಖಲೆಗಳನ್ನು ಪರಿಶೀಲಿಸಿ, ಉಭಯ ಕಡೆಯ ವಾದ -ಪ್ರತಿವಾದ ಆಲಿಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಸಿ.ಎಸ್.ತ್ಯಾಗರಾಜನ್‌, ಸದಸ್ಯರಾದ ಬಿ.ಯು.ಗೀತಾ ಅವರು ದೂರುದಾರರ ದೂರನ್ನು ಪುರಸ್ಕರಿಸಿ, ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ಮೊತ್ತದಲ್ಲಿ ಚೆಕ್‌ಗಳು ಮಾನ್ಯವಾದ ಶುಲ್ಕ ಮುರಿದುಕೊಂಡು, ₹57,740 ವನ್ನು ಹಿಂದಿರುಗಿಸುವಂತೆ, ಮಾನಸಿಕ ತೊಂದರೆ ಕೊಟ್ಟಿದ್ದಕ್ಕಾಗಿ ₹25 ಸಾವಿರ ಪರಿಹಾರ, ದೂರು ವೆಚ್ಚ ₹5 ಸಾವಿರ ಮತ್ತು ರಿ ಕನ್ವೆಯನ್ಸ್ ಡೀಡ್ ಮಾಡಿ, ಯಾವುದೇ ಸಾಲ ಬಾಕಿ ಇರುವುದಿಲ್ಲ ಎಂದು ಪ್ರಮಾಣ ಪತ್ರ ನೀಡಬೇಕು. ಸಾಲದ ಭದ್ರತೆಗೆ ಪಡೆದಿದ್ದ ಚೆಕ್‌ಗಳನ್ನು ಹಿಂದಿರುಗಿಸುವಂತೆ ಮಹತ್ವದ ಆದೇಶ ಮಾಡಿದ್ದಾರೆ. ದೂರುದಾರರ ಪರವಾಗಿ ಹಿರಿಯ ವಕೀಲ ಬಿ.ಬಸವರಾಜ ಉಚ್ಚಂಗಿದುರ್ಗ ವಾದ ಮಂಡಿಸಿದ್ದರು.

- - - (-ಫೋಟೋ: ಸಾಂದರ್ಭಿಕ ಚಿತ್ರ)

Share this article