- ದಾವಣಗೆರೆ ತಾ. ರೈತ ಮುಖಂಡರು, ಬೆಳೆಗಾರರಿಂದ ಪರಿಶೀಲನೆ । ನೀರಾವರಿ ಇಲಾಖೆ ಕಾಳಜಿಗೆ ಶ್ಲಾಘನೆ - - -
ಭದ್ರಾ ಡ್ಯಾಂನಿಂದ ಕಾಲುವೆಗೆ ಹರಿಸುತ್ತಿರುವ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ತಲುಪಿಸುವಂತೆ ಕುಕ್ಕವಾಡ ಗ್ರಾಮದಲ್ಲಿ ರೈತರು ಒತ್ತಾಯಿಸಿದ್ದರು. ಇದರಿಂದ ನೀರಾವರಿ ಇಲಾಖೆ ಎಚ್ಚೆತ್ತುಕೊಂಡ ಪರಿಣಾಮ ಈಗ ಅಟ್ಟುಕಟ್ಟು ಪ್ರದೇಶದ 2ನೇ ಝೋನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡರಾದ ಕುಕ್ಕವಾಡದ ಡಿ.ಮಲ್ಲೇಶಪ್ಪ, ಡಿ.ಸಿ.ದಿನೇಶ, ಎ.ಎಸ್.ರಾಜು, ಸಾವಜ್ಜಿ ಮಂಜುನಾಥ, ಸಾವಜ್ಜಿ ಕುಮಾರ, ಹಿರಿಯ ವಕೀಲ ಮತ್ತಿ ಹನುಮಂತಪ್ಪ, ಹೂವಿನಮಡು ಶಶಿ, ರವಿಕುಮಾರ, ಹೊನ್ನಮರಡಿ ಸಿದ್ದಯ್ಯ, ಮತ್ತಿ ಎನ್.ನಾಗರಾಜ ಇತರೆ ರೈತರು ನೀರಾವರಿ ಇಲಾಖೆ ಎಂಜಿನಿಯರ್ ಗಳೊಂದಿಗೆ ಕಾಲುವೆಗಳಿಗೆ ಖುದ್ದಾಗಿ ಭೇಟಿ ನೀಡಿ ನೀರಿನ ಹರಿವನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.ನೀರು ತಲುಪದ ಹಿನ್ನೆಲೆ ಚನ್ನಗಿರಿ ತಾ. ಹಿರೇಕೋಗಲೂರು ಸಮೀಪದ ಸೋಮನಾಳ್ ಗ್ರಾಮದ ಬಳಿ ಭದ್ರಾ ಕಾಲುವೆಗೆ ರೈತ ಮುಖಂಡರಾದ ಬಿ.ಎಂ.ಸತೀಶ ಇತರರು ಭೇಟಿ ನೀಡಿದ್ದರು. ಕುಕ್ಕವಾಡ ಗ್ರಾಮದಲ್ಲಿ ನಡೆದಿದ್ದ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ರೈತರ ಒತ್ತಾಯಕ್ಕೆ ಮಣಿದು, ಮಾತು ಕೊಟ್ಟಂತೆ ನೀರಾವರಿ ಇಲಾಖೆ ಎಂಜಿನಿಯರ್‌ಗಳು, ಸಿಬ್ಬಂದಿ ಹಾಗೂ ಸೌಡಿಗಳು ರಾತ್ರೋರಾತ್ರಿ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿರುವುದಕ್ಕೆ 2ನೇ ಝೋನ್‌ನಲ್ಲಿ ಇಷ್ಟು ಪ್ರಮಾಣದ ನೀರು ಹರಿಯುತ್ತಿರುವುದೇ ಸಾಕ್ಷಿ ಎಂದರು.
ದಾವಣಗೆರೆ ತಾಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ, ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಬತ್ತ ನಾಟಿ ಮಾಡಿಕೊಂಡು ಕಾಯುತ್ತಿದ್ದ ರೈತರು ನೀರಿಲ್ಲದೇ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ನೀರಾವರಿ ಇಲಾಖೆ ಗಮನಕ್ಕೆ ತರಲಾಗಿತ್ತು. ಇದರ ಬೆನ್ನಲ್ಲೇ ರಾತ್ರೋರಾತ್ರಿ ನೀರಾವರಿ ಇಲಾಖೆ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡಿದ್ದರಿಂದ 2ನೇ ಝೋನ್‌ನ ಸೋಮನಾಳ್ ಬಳಿ ಭದ್ರಾ ಕಾಲುವೆಯಲ್ಲಿ ಸಮರ್ಪಕ ನೀರು ಹರಿಯುತ್ತಿದೆ. ಈ ನಿರಂತರತೆಯನ್ನು ಇಲಾಖೆ ಅಧಿಕಾರಿಗಳು ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು.ಭದ್ರಾ ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಸಲು ಹಗಲು- ರಾತ್ರಿ ಅವಿರತ ಶ್ರಮಿಸಿದ ಕಾರ್ಯಪಾಲಕ ಎಂಜಿನಿಯರ್ ಚನ್ನಬಸಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ, ಸಹಾಯಕ ಎಂಜಿನಿಯರ್ ತಿಪ್ಪೇಸ್ವಾಮಿ, ಮಧು, ರಘುವೀರ ಮತ್ತು ಸೌಡಿಗಳಿಗೆ ರೈತ ಮುಖಂಡರು, ರೈತರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.
- - -(ಬಾಕ್ಸ್)
* ನಾಲೆಗೆ ಅಕ್ರಮ ಪಂಪ್‌ಸೆಟ್ ಅಳವಡಿಸದಂತೆ ಡಿಸಿ ಎಚ್ಚರಿಕೆ ದಾವಣಗೆರೆ: ಭದ್ರಾ ಡ್ಯಾಂನಿಂದ ಕಾಲುವೆಗೆ ಹರಿಸುತ್ತಿರುವ ನೀರು ಜಿಲ್ಲೆಯ ಅಚ್ಚುಕಟ್ಟಿಗೆ ಸಮರ್ಪಕವಾಗಿ ತಲುಪಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ನಾಲೆಯ ಉದ್ದಕ್ಕೂ 144ನೇ ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಗೊಳಿಸಿ, ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ಬರುತ್ತಿಲ್ಲವೆಂಬ ರೈತರು ದೂರಿದ್ದರು. ಈ ಹಿನ್ನೆಲೆ ನಾಲೆಯಲ್ಲಿ ಅಳವಡಿಸಿದ್ದ ಅಕ್ರಮ ಪಂಪ್ ಸೆಟ್‌ಗಳ ತೆರವುಗೊಳಿಸಲು ಸೂಚಿಸಲಾಗಿದೆ ಎಂದರು.
ನಾಲೆಯುದ್ದಕ್ಕೂ ಈ ತಿಂಗಳಾಂತ್ಯದವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ, ಅಕ್ರಮ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ತಡೆಯಲು ನಾಲೆಯುದ್ದಕ್ಕೂ ವಿದ್ಯುತ್ ಸಂಪರ್ತ ಸ್ಥಗಿತಗೊಳಿಸಿದೆ. ಅನಧಿಕೃತವಾಗಿ ನಾಲೆಗೆ ಪಂಪ್‌ಸೆಟ್ ಅಳವಡಿಸಿದವರು ಸ್ವಯಂ ಪ್ರೇರಿತರಾಗಿ ಅವುಗಳನ್ನು ತೆರವುಗೊಳಿಸಬೇಕು. ನೀರಾವರಿ ಇಲಾಖೆ ಅಧಿಕಾರಿ, ಎಂಜಿನಿಯರ್, ಸಿಬ್ಬಂದಿ, ಸೌಡಿಗಳು ಹಗಲಿರುಳು ನಾಲೆಯುದ್ದಕ್ಕೂ ಸಂಚರಿಸುತ್ತಾ, ಸಮರ್ಪಕವಾಗಿ ನೀರು ಹರಿಯುವಲ್ಲಿ ನಿಗಾ ವಹಿಸಿದ್ದಾರೆ ಎಂದು ತಿಳಿಸಿದರು.ಮೋಟಾರ್, ಅಕ್ರಮ ಪಂಪ್‌ಸೆಟ್‌ಗಳನ್ನು ಅಳವಡಿಸಿದರೆ ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ನೀರಾವರಿ, ಪೊಲೀಸ್, ಕಂದಾಯ, ಬೆಸ್ಕಾಂ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಅಕ್ರಮ ಪಂಪ್ ಸೆಟ್ ತೆರವಿಗೆ ಮುಂದಾಗಿದ್ದಾರೆ. ಅಕ್ರಮ ಪಂಪ್ ಸೆಟ್ ಅಳವಡಿಸಿದ್ದವರು ಸಹ ನಾವು ಕಠಿಣ ಕ್ರಮ ಕೈಗೊಳ್ಳುವಂತಹ ಪರಿಸ್ಥಿತಿಯನ್ನು ತಂದುಕೊಳ್ಳಬಾರದು. ಅಚ್ಚುಕಟ್ಟು ರೈತರಿಗೆ ತೊಂದರೆ ಮಾಡುವುದು ಸರಿಯಲ್ಲ ಎಂದು ಡಿಸಿ ಎಚ್ಚರಿಕೆ ನೀಡಿದರು.
- - --19ಕೆಡಿವಿಜಿ5, 6: ಚನ್ನಗಿರಿ ತಾ. ಸೋಮನಾಳ್ ಬಳಿ ಭದ್ರಾ ಕಾಲುವೆಯಲ್ಲಿ ಸಮರ್ಪಕ ನೀರು ಹರಿಯಲು ಇಲಾಖೆ ಕ್ರಮ ಕೈಗೊಳ್ಳಲಾಗಿದ್ದನ್ನು ದಾವಣಗೆರೆ ತಾಲೂಕಿನ ರೈತ ಮುಖಂಡರು ಪರಿಶೀಲಿಸಿದರು. ಈ ಸಂದರ್ಭ ಬೆಳೆಗಾರರಿಗೆ ನೀರಾವರಿ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. -19ಕೆಡಿವಿಜಿ7: ಜಿ.ಎಂ.ಗಂಗಾಧರ ಸ್ವಾಮಿ