ನೀತಿ ಸಂಹಿತೆ ಪಾಲನೆ, ಚುನಾವಣಾ ವೆಚ್ಚ ನಿರ್ವಹಣೆ ಕಡ್ಡಾಯ: ಆದೇಶ ತಿತರ್‌ಮರೆ

KannadaprabhaNewsNetwork |  
Published : Apr 25, 2024, 01:08 AM IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣೆ ವೆಚ್ಚ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. | Kannada Prabha

ಸಾರಾಂಶ

ಚುನಾವಣೆಗೆ ಸಂಬಂಧಿದಂತೆ ಯಾವುದೇ ಸ್ಪಷ್ಟನೆ ಬೇಕಾದಲ್ಲಿ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇರವಾಗಿ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ನಿಯೋಜಿತಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಆದೇಶ ತಿತರ್‌ಮರೆ ಹೇಳಿದರು.

ಹಾವೇರಿ: ಚುನಾವಣಾ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣಾ ವೆಚ್ಚ ನಿರ್ವಹಣೆ ಮಾಡುವುದು ಕಡ್ಡಾಯವಾಗಿದೆ ಎಂದು ಭಾರತ ಚುನಾವಣಾ ಆಯೋಗದಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ನಿಯೋಜಿತಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಆದೇಶ ತಿತರ್‌ಮರೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣೆ ವೆಚ್ಚ ನಿರ್ವಹಣೆ ಕುರಿತು ಮಾಹಿತಿ ನೀಡಿದ ಅವರು, ಚುನಾವಣೆಗೆ ಸಂಬಂಧಿದಂತೆ ಯಾವುದೇ ಸ್ಪಷ್ಟನೆ ಬೇಕಾದಲ್ಲಿ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇರವಾಗಿ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಅಭ್ಯರ್ಥಿಗಳಿಗೆ ತಿಳಿಸಿದರು.

ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತಿಲ್ಲ. ಪ್ರಾಣಿಗಳನ್ನು ಬಳಕೆ ಮಾಡುವಂತಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಚುನಾವಣಾ ಪ್ರಚಾರ ನಡೆಸಬಾರದು. ಚುನಾವಣಾ ರ‍್ಯಾಲಿ, ಸಭೆ-ಸಮಾರಂಭ ನಡೆಸುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿಗಾಗಿ ೪೮ ಗಂಟೆ ಪೂರ್ವದಲ್ಲಿ ಸುವಿಧಾ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅನುಮತಿ ಪಡೆದ ನಂತರವೇ ಚುನಾವಣಾ ಪ್ರಚಾರ ಸಭೆ-ಸಮಾರಂಭ, ರ‍್ಯಾಲಿ, ವಾಹನ ಬಳಕೆ ಇತ್ಯಾದಿ ಪ್ರಚಾರ ಕಾರ್ಯ ನಡೆಸಬೇಕು ಎಂದು ಅಭ್ಯರ್ಥಿಗಳಿಗೆ ವೀಕ್ಷಕರು ಮಾಹಿತಿ ನೀಡಿದರು.

ಪ್ರಚಾರ ಉದ್ದೇಶಕ್ಕಾಗಿ ಬಳಸುವ ವಾಹನಗಳ ಎಲ್ಲ ದಾಖಲೆಗಳು ಇರಬೇಕು. ಅನುಮತಿ ಪಡೆದ ವಾಹನಗಳು ಕಾನ್ವೆ ಮಾದರಿಯಲ್ಲಿ ಚಲಿಸುವಂತಿಲ್ಲ. ಕಾನ್ವೆಯಲ್ಲಿ (ವಾಹನಗಳ ಸರದಿ ಸಾಲು) ೧೦ ವಾಹನಗಳಗಿಂತ ಅಧಿಕ ವಾಹನಗಳನ್ನು ಬಳಸುವಂತಿಲ್ಲ. ಎರಡು ಕಾನ್ವೆಗಳ ಮಧ್ಯದಲ್ಲಿ ಕನಿಷ್ಠ ೧೦೦ ಮೀ. ಅಂತರವಿರಬೇಕು. ಬೈಕ್ ರ‍್ಯಾಲಿಗಳಲ್ಲಿ ಚಲಿಸುವ ಬೈಕುಗಳ ನಡುವೆ ಸಾಕಷ್ಟು ಅಂತರವಿರಬೇಕು. ರೋಡ್ ಶೋಗಳಲ್ಲಿ ಬಳಸುವ ಧ್ವನಿವರ್ಧಕಗಳಿಗೆ ಅನುಮತಿ ಕಡ್ಡಾಯವಾಗಿದೆ. ಈ ಧ್ವನಿವರ್ಧಕದ ಡೆಸಿಬಲ್ ನಿಗದಿಪಡಿಸಿದ ಮಿತಿಯೊಳಗೆ ಇರಬೇಕು. ಧ್ವನಿ ವರ್ಧಕಗಳನ್ನು ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆಯೊಳಗೆ ಬಳಸುವಂತಿಲ್ಲ. ರಾತ್ರಿ ೧೦ ಗಂಟೆಯ ನಂತರ ಬಹಿರಂಗ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.

ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚುರ ಪಡಿಸುವ ಜಾಹೀರಾತುಗಳಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ (ಎಂ.ಸಿ.ಎಂ.ಸಿ.)ಯಿಂದ ಅನುಮತಿ ಪಡೆಯಬೇಕು. ವಿದ್ಯುನ್ಮಾನ ಮಾಧ್ಯಮಗಳ ಪ್ರಚಾರಕ್ಕೆ ಬಳಸುವ ವಿಡಿಯೋ, ಆಡಿಯೋಗಳಿಗೂ, ಸಾಮಾಜಿಕ ಜಾಲತಾಣಗಳ ಮೂಲಕ ಮಾಡುವ ಪ್ರಚಾರ ಆಡಿಯೋ, ವಿಡಿಯೋ ಹಾಗೂ ಬಲ್ಕ್ ಸಂದೇಶಗಳಿಗೆ ಮುನ್ನ ಪೂರ್ವಾನುಮತಿ ಪಡೆಯುವಂತೆ ತಿಳಿಸಿದರು.

ಪ್ರಚಾರದ ಸಂದರ್ಭದಲ್ಲಿ ಕೋಮು ಅಥವಾ ದ್ವೇಷ ಭಾವನೆ ಕೆರಳಿಸುವ ಅಂಶಗಳಿಗೆ, ಜಾತಿ-ಧರ್ಮ ಆಧಾರಿತ ಚರ್ಚೆಗೆ ಅವಕಾಶವಿಲ್ಲ. ವೈಯಕ್ತಿಕ ಜೀವನದ ಅಂಶಗಳ ಮೇಲೆ ಪ್ರಶ್ನೆ, ಟೀಕೆ ಟಿಪ್ಪಣಿ ಮಾಡಬಾರದು ಎಂದು ತಿಳಿಸಿದರು.

ಚುನಾವಣಾ ಪ್ರಚಾರಕ್ಕಾಗಿ ಹೆಲಿಕ್ಯಾಪ್ಟರ್‌ನಲ್ಲಿ ಸ್ಟಾರ್ ಕ್ಯಾಂಪೇನರ್ ಆಗಮಿಸಿದರೆ ಅದರ ವೆಚ್ಚವನ್ನು ಪಕ್ಷಕ್ಕೆ ಹಾಕಲಾಗುವುದು. ಹೆಲಿಕ್ಯಾಪ್ಟರ್‌ನಲ್ಲಿ ಸ್ಟಾರ್ ಕ್ಯಾಂಪೇನರ್ ಜತೆಗೆ ಅಭ್ಯರ್ಥಿ ಪ್ರಯಾಣಿಸಿದರೆ ಶೇ. ೫೦ರಷ್ಟು ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಭರಿಸಲಾಗುವುದು. ಹೆಲಿಕ್ಯಾಪ್ಟರ್ ಇಳಿಯಲು ವ್ಯವಸ್ಥೆ, ಸುರಕ್ಷತಾ ಕ್ರಮಗಳು, ಭದ್ರತಾ ವ್ಯವಸ್ಥೆ ಆಯಾ ಪಕ್ಷದ ಅಭ್ಯರ್ಥಿಯ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.ಮಾಸ್ಟರ್ ಟ್ರೇನರ್ ಅರವಿಂದ ಐರಣಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಚುನಾವಣಾ ಮಾದರಿ ನೀತಿ ಸಂಹಿತೆ ಹಾಗೂ ವೆಚ್ಚ ನಿರ್ವಹಣೆ ಕುರಿತಂತೆ ಮಾರ್ಗಸೂಚಿಗಳನ್ನು ವಿವರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ, ಚುನಾವಣಾ ವೆಚ್ಚ ವೀಕ್ಷಕರಾದ ಐಆರ್‌ಎಸ್‌ ಅಧಿಕಾರಿ ಗುಲ್ಜಾರ್ ಬೇಗಂ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ