ಸೋಮರಡ್ಡಿ ಅಳವಂಡಿ
''''ಬೆಳೆ ವಿಮೆ ಆಣೆವಾರು ಲೆಕ್ಕಾಚಾರದಲ್ಲಿ ಯಡವಟ್ಟು'''' ಎಂಬ ಶೀರ್ಷಿಕೆಯಡಿ ''''ಕನ್ನಡಪ್ರಭ'''' ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ಅ. 20ರಂದು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ರೈತರ ಸಮ್ಮುಖದಲ್ಲಿ ಸಭೆ ನಡೆಸಿದ್ದರು. ಮರುಸರ್ವೆ ನಡೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದ್ದರು.
ಇದಾದ ಬಳಿಕ ಅಧಿಕಾರಿಗಳ ತಂಡ ಬೆಟಗೇರಿ ವ್ಯಾಪ್ತಿಯಲ್ಲಿ ಬೆಳೆ ವಿಮೆ ಲೆಕ್ಕಾಚಾರದ ಕುರಿತು ಪರಿಶೀಲನೆ ನಡೆಸಿ, ರೈತರ ಎದುರಲ್ಲಿಯೇ ತಪ್ಪಾಗಿದೆ ಎಂದು ಒಪ್ಪಿಕೊಂಡಿತ್ತು. ಆದರೆ, ಇದುವರೆಗೂ ಮರುಸರ್ವೆ ನಡೆಸುವ ಅಧಿಕೃತ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಹೀಗಾಗಿ ರೈತರು ಆಕ್ರೋಶಗೊಂಡಿದ್ದಾರೆ.ಉಳುಮೆ ಮಾಡದೆ ಕಾಯುತ್ತಿರುವ ರೈತರು: ಮರುಸರ್ವೆ ನಡೆಸಲು ಅಧಿಕಾರಿಗಳು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ರೈತರು ಜಮೀನು ಉಳುಮೆ ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಇಂದಲ್ಲ, ನಾಳೆ ಅಧಿಕಾರಿಗಳು ಬರುತ್ತಾರೆ ಎಂದು ಕಾಯುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಈಗ ಮತ್ತೊಮ್ಮೆ ಅದೇ ರೀತಿಯ ತಪ್ಪು ನಡೆದಿದ್ದು, ಮರುಸರ್ವೆ ನಡೆಸುವುದಾಗಿ ಭರವಸೆ ನೀಡಿದ ಅಧಿಕಾರಿಗಳು ಅದನ್ನು ಕಾರ್ಯಗತಗೊಳಿಸಿಲ್ಲ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಕೂಡ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ರೈತರು ಮತ್ತೆ ಅನ್ಯಾಯಕ್ಕೆ ಒಳಗಾಗುವ ಆತಂಕದಲ್ಲಿದ್ದಾರೆ.
ಹತ್ತು ವರ್ಷಗಳ ಹಿಂದೆ ನಡೆದ ತಪ್ಪು ಮತ್ತೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಈ ಬಾರಿ ಬೆಳೆ ಆಣೆವಾರು ಲೆಕ್ಕಾಚಾರದಲ್ಲಿನ ಲೋಪವನ್ನು ತಕ್ಷಣ ಪ್ರಶ್ನಿಸಲಾಗಿದೆ. ಮರುಸರ್ವೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಬಂದ್ ನಡೆಸಿ ಹೋರಾಟ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ.