ಕೊಪ್ಪಳ: ತಾಲೂಕಿನ ಇರಕಲ್ಲಗಡದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ವಿಭಾಗದ 10ನೇ ತರಗತಿ ವಿದ್ಯಾರ್ಥಿ ಎನ್.ಎಂ. ವಿಶ್ವಕಾರ್ತಿಕ್ ಸ್ಮಾರ್ಟ್ ಅಗ್ರಿಕಲ್ಚರ್ ಮಾದರಿ ತಯಾರಿಕೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿಜ್ಞಾನ ಶಿಕ್ಷಕ ಯಮನೂರಪ್ಪ ಮಾರ್ಗದರ್ಶನದಲ್ಲಿ ಇರಕಲ್ಲಗಡ ಪ್ರೌಢಶಾಲೆಯ ವಿದ್ಯಾರ್ಥಿಗಳು ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿರುವ ವಿಶ್ವಕಾರ್ತಿಕ್, ಪ್ರೌಢಶಾಲಾ ಹಂತದಲ್ಲಿಯೇ ಉನ್ನತ ತಾಂತ್ರಿಕ ಜ್ಞಾನ ಹೊಂದಿದ್ದು, ಕೋಡಿಂಗ್ ಮೂಲಕ ಸೆನ್ಸಾರ್ ಬಳಸಿ ವಿವಿಧ ಮಾದರಿಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದ್ದಾನೆ.
ಇದೇ ವಿದ್ಯಾರ್ಥಿ ನ. 3ರಂದು ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿಯೂ ಮಾದರಿ ಪ್ರದರ್ಶಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ವಿಭಿನ್ನ ಮಾದರಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಶಾಲೆಗೆ ಹೆಮ್ಮೆ ತಂದಿದೆ.ಸ್ಮಾರ್ಟ್ ಅಗ್ರಿಕಲ್ಚರ್ ವಿಶೇಷತೆ: ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಈ ಯೋಜನೆ ಕೃಷಿ ಕ್ಷೇತ್ರದಲ್ಲಿ ರೈತರಿಗೆ ನೆರವಾಗುವ ಉದ್ದೇಶ ಹೊಂದಿದೆ. ರಾಸ್‌ಬೆರಿ ಪೈ 3ಬಿ+ ಮತ್ತು ಇಎಸ್‌ಪಿ32 ಬಳಸಿ ಮಣ್ಣಿನ ತೇವಾಂಶ, ತಾಪಮಾನ ಹಾಗೂ ಪೋಷಕಾಂಶಗಳ (ಎನ್‌ಪಿಕೆ) ಪರಿಶೀಲನೆ ಮಾಡಬಹುದು.
ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ, ನೀರಿನ ಸಂರಕ್ಷಣೆ ಹಾಗೂ ಸುಸ್ಥಿರ ಕೃಷಿಗೆ ಪ್ರೋತ್ಸಾಹ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕಳೆದ ಸಾಲಿನಲ್ಲಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿರುವುದನ್ನು ಸ್ಮರಿಸಬಹುದು.