ಧಾರವಾಡ: ಹದಿಹರೆಯ ವಿದ್ಯಾರ್ಥಿ ಜೀವನದ ಸೂಕ್ಷಘಟ್ಟ ಮತ್ತು ಅತ್ಯಂತ ಸವಾಲಿನ ಸಮಯವೂ ಹೌದು ಎಂದು ಮನೋಆರೋಗ್ಯ ವೈದ್ಯರಾದ ಡಾ. ಸುಜ್ಞಾನಿದೇವಿ ಪಾಟೀಲ ಹೇಳಿದರು.
ಇಂದಿನ ಶಿಕ್ಷಣ ಕ್ರಮ ಕೇವಲ ಜ್ಞಾನಕ್ಕೆ ಸೀಮಿತವಾಗಿದ್ದು, ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ಬುದ್ಧಿವಂತಿಕೆ, ಒತ್ತಡ ನಿರ್ವಹಣೆ, ಸಂವಹಣಾ ಕೌಶಲ್ಯ, ಸಾಮರ್ಥ್ಯ ಬೆಳೆಸದಂತಾಗಿದೆ. ಪೋಷಕರು ಒತ್ತಡ ಹೇರದೇ ಅಗತ್ಯ ಮಾರ್ಗದರ್ಶನ ಸಲಹೆ ನೀಡಬೇಕು. ತಂತ್ರಜ್ಞಾನದ ದುರ್ಬಳಕೆಯ ಬಗ್ಗೆಯೂ ತಿಳಿಸಿ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಫಾದರ್ ಜೋಸೆಫ್ ಲೋಪೆಸ್ ಮಾತನಾಡಿ, ಜಗತ್ತು ಇಂದು ಅನೇಕ ಕ್ಲಿಷ್ಟ ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳೂ ಇವೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಮರ್ಥವಾಗಿ ಎದುರಿಸಬೇಕು. ಸುಭದ್ರ ರಾಷ್ಟ್ರ ನಿರ್ಮಾಣ ನಿಮ್ಮಿಂದ ಸಾಧ್ಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಬಿಇಡಿ ಕಾಲೇಜಿನ ಪ್ರಾಚಾರ್ಯ ಫಾ. ಅಲ್ವಿನ್ ಸುಧೀರ ಮಾತನಾಡಿ, ಹದಿಹರೆಯದಲ್ಲಿ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಮನಸ್ಸು ಚಂಚಲ ಸ್ವಭಾವ ಹೊಂದಿರುತ್ತದೆ. ಹೀಗಾಗಿ, ಏಕಾಗ್ರತೆ ಬಹಳ ಮುಖ್ಯ. ಭವಿಷ್ಯದ ಚಿಂತನೆ ಇಟ್ಟುಕೊಂಡು ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಗುರುರಾಜ ಸಬನೀಸ್, ವಿನಾಯಕ ಪಾಟೀಲ ಇದ್ದರು. ಎಂ.ಬಿ. ಕಣವಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಕುರಹಟ್ಟಿ ನಿರೂಪಿಸಿದರು. ಆರ್. ಎಂ. ಕ್ಯಾಮನಗೌಡ್ರ ವಂದಿಸಿದರು.