ಮುನಿರಾಬಾದ್: ದಾಸ ಶ್ರೇಷ್ಠ ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬ ಶಿಕ್ಷಕ, ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಿ.ಲಿಂಗಯ್ಯ ಶಾಲೆ ಅಧ್ಯಕ್ಷ ಸಾಂಬಶಿವರಾವ್ ಹೇಳಿದರು.
ಕನಕದಾಸರು ತಮ್ಮ ಶ್ರೇಷ್ಠ ಭಕ್ತಿ ಹಾಗೂ ಶ್ರದ್ಧೆಯಿಂದ ಶ್ರೀಕೃಷ್ಣ ಭಗವಂತನನ್ನು ತಮ್ಮ ಕಡೆಗೆ ತಿರುಗುವಂತೆ ಮಾಡಿದರು. ಶಿಕ್ಷಕರು ಮಕ್ಕಳಿಗೆ ಶ್ರದ್ಧಾಭಕ್ತಿಯಿಂದ ಪಾಠ ಮಾಡಬೇಕು ಹಾಗೂ ಮಕ್ಕಳು ಸಹ ಮೊಬೈಲ್,ಟಿವಿ ಗೀಳನ್ನು ಬಿಟ್ಟು ಶ್ರದ್ಧೆಯಿಂದ ಪಾಠ ಕಲಿತು ಓದಿದರೆ ಅವರು ಜೀವನದಲ್ಲಿ ಉತ್ತುಂಗ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತದೆ. ಶಿಕ್ಷಕರು ಹಾಗೂ ಮಕ್ಕಳು ಕನಕದಾಸರ ಆದರ್ಶ ಹಾಗೂ ತತ್ವ ಮಾದರಿಯನ್ನಾಗಿ ಮಾಡಿಕೊಂಡು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಸೆಲ್ವಿ ಚಾರ್ಜ್ ,ಕನಕದಾಸರು ತಮ್ಮ ಕೀರ್ತನೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಅವರು ಅಂದು ರಚಿಸಿದ ಕೀರ್ತನೆಗಳಲ್ಲಿ ಎಷ್ಟು ಶಕ್ತಿ ಇದೆ ಎಂದರೆ ಅವು ಇಂದಿಗೂ ತುಂಭಾ ಪ್ರಸಿದ್ಧವಾಗಿದೆ. ಅವರ ಕೀರ್ತನೆ ಪೀಳಿಗೆಯ ನಂತರ ಪೀಳಿಗೆಗೆ ಅರ್ಥ ಗರ್ಭಿತವಾದ ಸಂದೇಶ ಸಾರುತ್ತಿದೆ ಎಂದರು.ಶಿಕ್ಷಕ ಶಿವಕುಮಾರ್ ಕನಕದಾಸರ 84 ಲಕ್ಷ ದಾಟಿ ಬಂದ ಈ ಶರೀರ ಎಂಬ ಕೀರ್ತನೆ ಹಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಮಹಾಬಲೇಶ್ವರ ಹಾಗೂ 9ನೇ ತರಗತಿಯ ವಿದ್ಯಾರ್ಥಿನಿ ಯಶಸ್ವಿನಿ ಮಾತನಾಡಿದರು. ಆಡಳಿತಾಧಿಕಾರಿ ಶ್ರೀನಿವಾಸ ಆಚಾರ್ , ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿಂದುಶ್ರೀ ಹಾಗೂ ಕುಮುದಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.