ಅಭಿವೃದ್ಧಿ ಕಾರ್ಯಗಳಿಗೆ ಜಮೀನು ಖರೀದಿಗೆ ಮುಂದಾಗಿ: ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Jun 20, 2024, 01:02 AM IST
18ಕೆಪಿಎಲ್5:ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು.  | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಭೂಸ್ವಾಧೀನಕ್ಕೆ ಅನುದಾನಕ್ಕೆ ಕೊರತೆ ಇಲ್ಲ. ಅಭಿವೃದ್ಧಿ ಕಾರ್ಯದ ಕಾಮಗಾರಿಗಳಿಗೆ ಅಗತ್ಯವಾದ ಭೂಮಿ ಖರೀದಿಗೆ ಅಧಿಕಾರಿಗಳು ಮುಂದಾಗಬೇಕು.

ಕೆಕೆಆರ್‌ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ । ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಭೂಸ್ವಾಧೀನಕ್ಕೆ ಅನುದಾನ । ಸಿಎಂ ಆರ್ಥಿಕ ಸಲಹೆಗಾರ ಸೂಚನೆಕನ್ನಡಪ್ರಭ ವಾರ್ತೆ ಕೊಪ್ಪಳ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಭೂಸ್ವಾಧೀನಕ್ಕೆ ಅನುದಾನಕ್ಕೆ ಕೊರತೆ ಇಲ್ಲ. ಅಭಿವೃದ್ಧಿ ಕಾರ್ಯದ ಕಾಮಗಾರಿಗಳಿಗೆ ಅಗತ್ಯವಾದ ಭೂಮಿ ಖರೀದಿಗೆ ಅಧಿಕಾರಿಗಳು ಮುಂದಾಗಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ

ಬಸವರಾಜ ರಾಯರಡ್ಡಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಕ್ಕೆ ನಾನಾ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಆದರೆ ಕಾಮಗಾರಿಯನ್ನು ಆರಂಭಿಸಲು ಜಮೀನು ಸಿಗುತ್ತಿಲ್ಲ ಎಂದು ಬಹುತೇಕ ಇಲಾಖೆಗಳ ಅಧಿಕಾರಿಗಳು ಹೇಳುತ್ತಾರೆ. ಜಮೀನು ಖರೀದಿ ಮಾಡಲು ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ಜಮೀನು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸುಮ್ಮನೆ ಕೂಡಬಾರದು. ಜಮೀನು ಖರೀದಿಗೆಂದೇ ಕೆಕೆಆರ್‌ಡಿಬಿನಲ್ಲಿ ಹಣ ಇದೆ. ಜಮೀನು ಖರೀದಿ ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಮುಂದೆ ಬಂದಲ್ಲಿ ಕೆಕೆಆರ್‌ಡಿಬಿಯಿಂದ ಅನುದಾನ ಸಿಗುತ್ತದೆ ಎಂದು ತಿಳಿಸಿದರು.

ಯಲಬುರ್ಗಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಜೂರಾದ ಶಾಲೆಗಳಿಗೆ ಜಮೀನು ಲಭ್ಯತೆ, ಜಮೀನಿನ ಬೇಡಿಕೆಯ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಂದ ಮಾಹಿತಿ ಪಡೆದರು. ನಮ್ಮ ಜಿಲ್ಲೆಗೆ ಮಂಜೂರಾದ ಶಾಲೆಗಳಿಗೆ ಅನುದಾನ ನೀಡಲಾಗಿದೆ. ಆದ್ದರಿಂದ ಶಾಲೆಗಳಿಗೆ ನಿವೇಶನ ಲಭ್ಯವಿದ್ದ ಕಡೆಗಳಲ್ಲಿ ವಾರದೊಳಗೆ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಬೇಕು. ಡಿಡಿಪಿಐ ಮತ್ತು ತಹಸೀಲ್ದಾರರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಈಗ ಹೊಸದಾಗಿ ಮೂರು ಮೊರಾರ್ಜಿ ಶಾಲೆಗಳು ಮಂಜೂರಾಗಿವೆ. ಅವುಗಳಿಗೆ ಜಮೀನು ಬೇಕಿದೆ ಎಂದು ಡಿಡಿಪಿಐ ಅವರು ಸಭೆಗೆ ತಿಳಿಸಿದರು. ಯಾವ ಯಾವ ಕಡೆಗಳಲ್ಲಿ ಜಮೀನಿನ ಅಗತ್ಯವಿದೆಯೋ ಎಂಬುದರ ಬಗ್ಗೆ ಕೂಡಲೇ ಪತ್ರ ಬರೆದು ಪ್ರಕ್ರಿಯೆ ನಡೆಸಲು ರಾಯರೆಡ್ಡಿ ಅವರು ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದರು.

ಯಲಬುರ್ಗಾ ಕ್ಷೇತ್ರಕ್ಕೆ ಈಗಾಗಲೇ 15 ಬಸ್ ನಿಲ್ದಾಣಗಳು ಮಂಜೂರಾಗಿವೆ. ತಲಾ ಒಂದು ಬಸ್ ನಿಲ್ದಾಣಕ್ಕೆ ಈಗಾಗಲೇ ₹3 ಕೋಟಿ ನಿಗದಿಪಡಿಸಲಾಗಿದೆ. ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಬೇಕು ಎಂದು ರಾಯರಡ್ಡಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಯಲಬುರ್ಗಾ ಕ್ಷೇತ್ರದ ವಿವಿಧೆಡೆಯ 9 ಕಡೆಗೆ ನಿರ್ಮಾಣವಾಗುವ ಬಸ್ ನಿಲ್ದಾಣಗಳಿಗೆ ಕೆಕೆಆರ್‌ಡಿಬಿಯಿಂದ ಅನುದಾನ ನಿಗದಿಪಡಿಸಲಾಗಿದೆ. ಮುರುಡಿ, ಹಿರೇಮ್ಯಾಗೇರಿ, ಗಾಣದಾಳು, ಮಂಡಲಗೇರಿ, ಹಿರೇಅರಳಿಹಳ್ಳಿ ಮತ್ತು ಬೆಣಕಲ್ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅನುದಾನ ನಿಗದಿಪಡಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕೆಕೆಆರ್‌ಡಿಬಿಯ ವಿವಿಧ ಕಾಮಗಾರಿಗಳ ಭೂಸ್ವಾಧೀನಕ್ಕೆ ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ವಿವಿಧ ವಿಶ್ವ ವಿದ್ಯಾಲಯಗಳ ಕುಲ ಸಚಿವರು ಮತ್ತು ಜಿಲ್ಲಾ ನ್ಯಾಯಾಲಯ ಇಲಾಖೆ ಹಾಗೂ ಕೌಶಲ ಅಭಿವೃದ್ಧಿ ಕೇಂದ್ರ ಅಧಿಕಾರಿಗಳು ಇದ್ದರು.ಟೆಂಡರ್‌ಗೆ ಪ್ರಕ್ರಿಯೆಗೆ ಅನುಮೋದನೆ:

ಜಿಲ್ಲೆಗೆ ಮಂಜೂರಾದ ಶಾಲೆಗಳು, ಕಾಲೇಜುಗಳು ಮತ್ತು ವಸತಿ ಶಾಲೆಗಳಿಗೆ ವಿವಿಧೆಡೆ ಜಮೀನು ಗುರುತಿಸಲು ನಿರ್ಣಯಿಸಲಾಯಿತು. ಈಗಾಗಲೇ ನಿವೇಶನ ಇರುವ ಕಡೆ ಅನುದಾನ ಬಿಡುಗಡೆ ಮಾಡಲು ಮತ್ತು ಈಗಾಗಲೇ ಬಿಡುಗಡೆಯಾದ ಅನುದಾನ ಬಳಕೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕೊಪ್ಪಳ ವಿಶ್ವವಿದ್ಯಾಲಯ ನಿರ್ಮಾಣ, ಜಿಲ್ಲಾ ನ್ಯಾಯಾಲಯ ನಿರ್ಮಾಣ, ಕೌಶಲ ಅಭಿವೃದ್ಧಿ ಕೇಂದ್ರ ನಿರ್ಮಾಣ ಸೇರಿದಂತೆ ಮಹತ್ವದ ಕಟ್ಟಡ ನಿರ್ಮಾಣಗಳಿಗೆ ಅವಶ್ಯವಿರುವಷ್ಟು ಜಮೀನು ನೀಡುವುದರ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು. ಕುಕನೂರ, ಕಾರಟಗಿ ಮತ್ತು ಕನಕಗಿರಿಯಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ