ಆರೋಗ್ಯ ಇಲಾಖೆ ಬಳಿಕ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಪಾಲಿಕೆ ತಪಾಸಣೆ

KannadaprabhaNewsNetwork |  
Published : Aug 17, 2026, 02:15 AM IST
ರೆಸ್ಟೋರೆಂಟ್‌ನಲ್ಲಿ ತಪಾಸಣೆ | Kannada Prabha

ಸಾರಾಂಶ

ಆರೋಗ್ಯ ಇಲಾಖೆಯ ಬಳಿಕ ಪೂರ್ವ ನಗರ ಪಾಲಿಕೆಯಿಂದಲೂ ನಗರದ ವಿವಿಧ ಹೊಟೇಲ್‌, ರೆಸ್ಟೋರೆಂಟ್, ಪೇಯಿಂಗ್ ಗೆಸ್ಟ್, ಹಾಸ್ಟೆಲ್‌ಗಳಲ್ಲಿನ ಅಡುಗೆ ಕೋಣೆಗಳು, ಆಹಾರ ಸಾಮಗ್ರಿಗಳ ಪರಿಶೀಲನೆ ಕಾರ್ಯವನ್ನು ಆರಂಭಿಸಲಾಗಿದೆ. ಗೇರ್ ಸ್ಕೂಲ್ ರಸ್ತೆ, ನ್ಯೂ ಹಾರಿಜಾನ್ ಕಾಲೇಜು ಪ್ರದೇಶ, ತೂಬರಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿರುವ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳನ್ನು ಭಾನುವಾರ ತಪಾಸಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರೋಗ್ಯ ಇಲಾಖೆಯ ಬಳಿಕ ಪೂರ್ವ ನಗರ ಪಾಲಿಕೆಯಿಂದಲೂ ನಗರದ ವಿವಿಧ ಹೊಟೇಲ್‌, ರೆಸ್ಟೋರೆಂಟ್, ಪೇಯಿಂಗ್ ಗೆಸ್ಟ್, ಹಾಸ್ಟೆಲ್‌ಗಳಲ್ಲಿನ ಅಡುಗೆ ಕೋಣೆಗಳು, ಆಹಾರ ಸಾಮಗ್ರಿಗಳ ಪರಿಶೀಲನೆ ಕಾರ್ಯವನ್ನು ಆರಂಭಿಸಲಾಗಿದೆ. ಗೇರ್ ಸ್ಕೂಲ್ ರಸ್ತೆ, ನ್ಯೂ ಹಾರಿಜಾನ್ ಕಾಲೇಜು ಪ್ರದೇಶ, ತೂಬರಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿರುವ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳನ್ನು ಭಾನುವಾರ ತಪಾಸಣೆ ಮಾಡಲಾಗಿದೆ. ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಹಾಗೂ ನೈರ್ಮಲ್ಯವನ್ನು ಕಾಪಾಡುವ ಉದ್ದೇಶದಿಂದ ಹೋಟೆಲ್, ರೆಸ್ಟೋರೆಂಟ್, ಹಾಸ್ಟೆಲ್, ಡಾಬಾ ಸೇರಿದಂತೆ ಎಲ್ಲ ಆಹಾರ ತಯಾರಿಕೆ ಕೇಂದ್ರಗಳನ್ನು 1 ವಾರ ವಿಶೇಷ ತಪಾಸಣೆ ನಡೆಸಲಾಗುತ್ತದೆ. ಅದಕ್ಕಾಗಿ ನಗರ ಯೋಜನೆ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಏಳು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ತಿಳಿಸಿದ್ದಾರೆ.

ಆಹಾರ ತಯಾರಿಕೆ ಮತ್ತು ಪೂರೈಕೆ ಕೇಂದ್ರಗಳಲ್ಲಿ ಆಹಾರ ಪದಾರ್ಥಗಳ ಸಂಗ್ರಹಣೆ ಹಾಗೂ ಬಳಕೆಯ ಸಂದರ್ಭದಲ್ಲಿ ಅವುಗಳ ಅವಧಿ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರಿಶೀಲಿಸಲಾಗುವುದು.ಕಳಪೆ ನೈರ್ಮಲ್ಯ, ಅಸುರಕ್ಷಿತ ನೀರಿನ ಬಳಕೆ ಅಥವಾ ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ನೈರ್ಮಲ್ಯದ ತಪಾಸಣೆ ಜೊತೆಗೆ ಮಂಜೂರಾದ ಕಟ್ಟಡ ನಕ್ಷೆ, ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ನಿರ್ಮಾಣ ವಿನ್ಯಾಸದಲ್ಲಿ ಬದಲಾವಣೆ ಕುರಿತು ಪರಿಶೀಲಿಸಲಾಗುತ್ತದೆ. ಸೆಟ್‌ಬ್ಯಾಕ್ ನಿಯಮಗಳ ಉಲ್ಲಂಘನೆ, ಅನಧಿಕೃತ ನಿರ್ಮಾಣ, ಹೆಚ್ಚುವರಿ ಮಹಡಿಗಳ ನಿರ್ಮಾಣ ಹಾಗೂ ಕಟ್ಟಡದ ಅನುಮೋದಿತ ಬಳಕೆಯನ್ನು ಬದಲಾಯಿಸಿ ವಾಣಿಜ್ಯ ಅಥವಾ ವಸತಿ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.

ಮಾನ್ಯತೆ, ಸುರಕ್ಷತೆ ಪರಿಶೀಲನೆ: ಪಿಜಿಗಳು ಉದ್ದಿಮೆ ಪರವಾನಗಿ ಹಾಗೂ ಅನ್ವಯವಾಗುವ ಇತರೆ ಪರವಾನಗಿಗಳನ್ನು ಹೊಂದಿವೆಯೇ, ಅಗ್ನಿ ಸುರಕ್ಷತಾ ವ್ಯವಸ್ಥೆಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಸಮರ್ಪಕವಾಗಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸ್ನಚ್ಛತೆ ಮತ್ತು ನೈರ್ಮಲ್ಯ, ಶೌಚಗೃಹಗಳ ನಿರ್ವಹಣೆ, ಕುಡಿಯುವ ನೀರಿನ ಲಭ್ಯತೆ ಹಾಗೂ ನೀರು ಸರಬರಾಜು ವ್ಯವಸ್ಥೆ, ಒಳಚರಂಡಿ ಮತ್ತು ತ್ಯಾಜ್ಯ ನೀರಿನ ವಿಲೇವಾರಿ ವ್ಯವಸ್ಥೆ, ಕಸ ವಿಂಗಡಣೆ, ಸಂಗ್ರಹ, ವಿಲೇವಾರಿ, ರಸ್ತೆ, ಫುಟ್‌ಪಾತ್ ಅಥವಾ ಇತರೆ ಸಾರ್ವಜನಿಕ ಆಸ್ತಿಗಳನ್ನು ಪಿಜಿ ನಿರ್ಮಾಣದ ವೇಳೆ ಒತ್ತುವರಿ ಮಾಡಿಕೊಂಡಿರುವ ಕುರಿತು ಪರಿಶೀಲನೆ ನಡೆಯಲಿದೆ. ಪರಿಶೀಲನಾ ತಂಡ ಪ್ರತಿಯೊಂದು ಆಸ್ತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಕಂಡುಬರುವ ಉಲ್ಲಂಘನೆಗಳನ್ನು ದಾಖಲಿಸಲಿದೆ. ಅಗತ್ಯವಿರುವ ಸಂದರ್ಭಗಳಲ್ಲಿ ಉಲ್ಲಂಘನೆಗಳ ಜಿಯೋ-ಟ್ಯಾಗ್ ಮಾಡಲಾದ ಛಾಯಾಚಿತ್ರಗಳನ್ನು ಪಡೆದು ದಾಖಲೆ ಮಾಡಿಕೊಳ್ಳುವಂತೆ ಆಯುಕ್ತ ರಮೇಶ್ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾವಳಿಯಲ್ಲಿ ಕ್ಷೀಣಿಸುತ್ತಿದೆ ಕಪ್ಪೆಗಳ ಸಂತತಿ!
ಲಭ್ಯತೆ ಆಧರಿಸಿ ತ.ನಾಡಿಗೆ ಕಾವೇರಿ ನೀರು: ಸಿಎಂ