ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಬಳಿಕ ಗ್ಯಾರಂಟಿ ಸ್ಥಗಿತ - ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭವಿಷ್ಯ

KannadaprabhaNewsNetwork | Updated : Nov 02 2024, 10:37 AM IST

ಸಾರಾಂಶ

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯ ಶೈಲಿ ನೋಡಿದರೆ ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ಚುನಾವಣೆಯವರೆಗೂ ಸುಮ್ಮನಿರಿ ಅಂದ ಹಾಗೇ ಇದೆ. ಬಳಿಕ ತೆಗೆದು ಹಾಕಿ ಎಂಬ ಮಾನಸಿಕತೆಯಲ್ಲಿ ಅವರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:  ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಬಳಿಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಯೋಚನೆಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಮಾತುಗಳು ಕೇಳಿದರೆ ಚುನಾವಣೆ ದೃಷ್ಟಿಯಿಂದ ಮಾತ್ರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದಾರೆ ಅನಿಸುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದರು.

ಖರ್ಗೆ ಅವರ ಹೇಳಿಕೆಯ ಶೈಲಿ ನೋಡಿದರೆ ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ಚುನಾವಣೆಯವರೆಗೂ ಸುಮ್ಮನಿರಿ ಅಂದ ಹಾಗೇ ಇದೆ. ಬಳಿಕ ತೆಗೆದು ಹಾಕಿ ಎಂಬ ಮಾನಸಿಕತೆಯಲ್ಲಿ ಅವರಿದ್ದಾರೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡುವ ಮೂಲಕ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಲು ಯತ್ನಿಸಿದೆ ಎಂದು ಹರಿಹಾಯ್ದರು.

ಐದು ಗ್ಯಾರಂಟಿ ನಾವು ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಎಲ್ಲಿ ಪೂರೈಸಿದ್ದಾರೆ. ಯುವನಿಧಿ ಯೋಜನೆ 2023-24ರಲ್ಲಿ ಪದವಿ ಮುಗಿಸಿದ ಯಾವ ಯುವಕರಿಗೂ ನೀಡಿಲ್ಲ. ಕಾಂಗ್ರೆಸ್ ಎಂಥ ಖದೀಮರು ಅಂದರೆ ನಾವು ನೀಡುತ್ತಿದ್ದ 5 ಕೆಜಿ ಅಕ್ಕಿಯನ್ನು ತಾವೇ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂತಹ ಕಳ್ಳರನ್ನು ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸುಳ್ಳು ಆಶ್ವಾಸನೆಗೆ ಕಿವಿಗೊಡದ ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ಜನರು ಅವರನ್ನು ಕಡೆಗಣಿಸಿದರು. ಅದೇ ರೀತಿ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲೂ ಕಿತ್ತೆಸೆಯುತ್ತಾರೆ. ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಅನ್ನು ಅನೇಕ ರಾಜ್ಯದಲ್ಲಿ ತೆಗೆದು ಹಾಕಿದೆ. ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯವಾಗಿದೆ ಎಂದು ತಿಳಿಸಿದರು.

ಜಮೀರ್‌ ಮತಾಂಧ:

ಸಚಿವ ಜಮೀರ್ ಅಹಮದ್ ಖಾನ್ ಒಬ್ಬ ಮತಾಂಧ. ಅವನ ಹೇಳಿಕೆಯಿಂದ ಹಾವೇರಿಯಲ್ಲಿ ಕಲ್ಲು ತೂರಾಟದಂತಹ ಗಂಭೀರ ವಿದ್ಯಮಾನಗಳು ನಡೆದವು. ರಾಜಕೀಯ ವ್ಯಕ್ತಿಗಳು ಅನಧಿಕೃತ ಆದೇಶ ಪಾಲನೆ ಮಾಡುವ ಅಧಿಕಾರಿಗಳಿಗೆ ಕನಿಷ್ಠ ಜ್ಞಾನವೂ ಇಲ್ವಾ? ಪ್ರತಿಯೊಬ್ಬ ಅಧಿಕಾರಿ ಇದಕ್ಕೆ ಉತ್ತರ ನೀಡುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಕೆ ನೀಡಿದರು.

Share this article