ಸರ್ಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ಹೆಚ್ಚಳ: ಆರೋಪ

KannadaprabhaNewsNetwork |  
Published : May 17, 2024, 12:34 AM IST
ಫೋಟೋ : ೧೬ಕೆಎಂಟಿ_ಎಂಎವೈ_ಕೆಪಿ4 : ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ರ ನೇತೃತ್ವದಲ್ಲಿ ತಾಲೂಕು ಸೌಧದಲ್ಲಿ ಗುರುವಾರ ಸಾರ್ವಜನಿಕರ ಅಹವಾಲು ಸಭೆ ನಡೆಯಿತು. ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಲೋಕಾಯುಕ್ತ ಪಿಐ ವಿನಾಯಕ ಬಿಲ್ಲಬಾ, ತಹಸೀಲ್ದಾರ ಪ್ರವೀಣ ಕರಾಂಡೆ ಇನ್ನಿತರರು ಇದ್ದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ಹಲವು ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಏಜೆಂಟರ ಕಾಟ ಹೆಚ್ಚಾಗಿದೆ. ಅದರಲ್ಲೂ ಕಂದಾಯ ವಿಭಾಗದಲ್ಲಂತೂ ಏಜೆಂಟರ ಹೊರತು ಕೆಲಸ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಸಭೆಯಲ್ಲಿ ಪ್ರಮುಖವಾಗಿ ಕೇಳಿಬಂತು.

ಕುಮಟಾ: ಇಲ್ಲಿನ ತಾಲೂಕು ಸೌಧದಲ್ಲಿ ಗುರುವಾರ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ದೂರು/ಅಹವಾಲು ಸ್ವೀಕಾರ ಸಭೆ ಜರುಗಿತು.

ತಾಲೂಕಿನಲ್ಲಿ ಹಲವು ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಏಜೆಂಟರ ಕಾಟ ಹೆಚ್ಚಾಗಿದೆ. ಅದರಲ್ಲೂ ಕಂದಾಯ ವಿಭಾಗದಲ್ಲಂತೂ ಏಜೆಂಟರ ಹೊರತು ಕೆಲಸ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಸಭೆಯಲ್ಲಿ ಪ್ರಮುಖವಾಗಿ ಕೇಳಿಬಂತು.

ಸಭೆಯಲ್ಲಿ ಕೆಲ ವಕೀಲರು, ಸಾರ್ವಜನಿಕರು ಈ ವಿಚಾರ ಲೋಕಾಯುಕ್ತರ ಬೆಳಕಿಗೆ ತಂದರು. ಇಲ್ಲಿ ಸಾರ್ವಜನಿಕರು ನೇರವಾಗಿ ಬಂದರೆ ಯಾವುದೇ ಕೆಲಸ ಆಗುವುದಕ್ಕೆ ಕಷ್ಟಪಡಬೇಕು. ಆದರೆ ಏಜೆಂಟರ ಮೂಲಕ ಸರಾಗವಾಗಿ ಕೆಲಸವಾಗುತ್ತದೆ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆಯ ಕಾರ್ಯವೈಖರಿಯ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಇದನ್ನು ತಹಸೀಲ್ದಾರ್‌ ಪ್ರವೀಣ ಕರಾಂಡೆ ನಿರಾಕರಿಸಿದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದ ಬಳಿಕ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ, ಲೋಕಾಯುಕ್ತವು ಭ್ರಷ್ಟಾಚಾರದ ವಿರುದ್ಧ ಟೊಂಕ ಕಟ್ಟಿದೆ. ಆದರೆ ಯಾವುದೇ ಇಲಾಖೆಯ ವಿರುದ್ಧ ದೂರುಗಳಿದ್ದಲ್ಲಿ ಸೂಕ್ತ ಸಾಕ್ಷ್ಯಾಧಾರ ಸಮೇತ ಲೋಕಾಯುಕ್ತದಲ್ಲಿ ದೂರು ದಾಖಲಿಸುವುದಕ್ಕೆ ಅವಕಾಶವಿದೆ. ಹಾಗೆಯೇ ಕೆಲವೊಂದು ಸಮಸ್ಯೆಯಗಳಿಗೆ ಇಲಾಖಾ ಮಟ್ಟದಲ್ಲಿಯೇ ಪರಿಹಾರ ಸಾಧ್ಯವಿದ್ದು, ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೂ ದೂರು ಸಲ್ಲಿಸಿ ಇಲಾಖಾ ಮಟ್ಟದಲ್ಲೇ ನ್ಯಾಯ ಪಡೆಯಬಹುದು ಎಂದರು.

ಸಭೆಯಲ್ಲಿ ಒಟ್ಟೂ ೨೧ ದೂರುಗಳು ಬಂದವು. ಅದರಲ್ಲಿ ೩ ದೂರು ಮಾತ್ರ ಲೋಕಾಯುಕ್ತದಲ್ಲಿ ನೋಂದಣಿಯಾಗಿದ್ದು, ಉಳಿದ ದೂರುಗಳನ್ನು ಆಯಾ ಇಲಾಖೆಗೆ ಸೂಕ್ತ ವಿಲೇವಾರಿಗೆ ನೀಡಲಾಯಿತು. ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್‌ ಪ್ರವೀಣ ಕರಾಂಡೆ, ಲೋಕಾಯುಕ್ತ ಪಿಐಗಳಾದ ವಿನಾಯಕ ಬಿಲ್ಲಬಾ, ಪ್ರಸಾದ ಪೆನ್ನೆಕರ, ಸಿದ್ಧರಾಯ, ತಾಪಂ ಇಒ ರಾಜೇಂದ್ರ ಭಟ್, ಸಿಪಿಐ ತಿಮ್ಮಪ್ಪ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸಮಾಜ ಕಲ್ಯಾಣ ಇಲಾಖೆಯ ಭಾರತಿ ಆಚಾರ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಪಶು ಸಂಗೋಪನಾಧಿಕಾರಿ ಡಾ. ವಿಶ್ವನಾಥ ಹೆಗಡೆ, ಗ್ರಾಮೀಣ ನೀರು ಪೂರೈಕೆ ವಿಭಾಗದ ಎಇಇ ರಾಘವೇಂದ್ರ ನಾಯ್ಕ, ಆರ್‌ಎಫ್‌ಒ ಎಸ್.ಟಿ. ಪಟಗಾರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ