ಕೋ ಆಪರೇಟಿವ್ ಸೊಸೈಟಿ: ಕೋಟ್ಯಂತರ ರು. ಅಕ್ರಮ

KannadaprabhaNewsNetwork |  
Published : May 17, 2024, 12:34 AM IST
ವಿಶ್ವಗುರು ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ | Kannada Prabha

ಸಾರಾಂಶ

ಚಾಮರಾಜನಗರದಲ್ಲಿ ತೆರೆದಿದ್ದ ವಿಶ್ವಗುರು ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಶಾಖೆಯಲ್ಲಿ ಮ್ಯಾನೇಜರ್ ಆಗಿರುವ ಎಂ.ಕೆ. ಶಶಿಕುಮಾರ್ ಉ. ಪೃಥ್ವಿ ಕೋಟ್ಯಂತರ ರು. ವಂಚನೆ ಮಾಡಿದ್ದು, ಈತನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಗುಂಡ್ಲುಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರದಲ್ಲಿ ತೆರೆದಿದ್ದ ವಿಶ್ವಗುರು ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಶಾಖೆಯಲ್ಲಿ ಮ್ಯಾನೇಜರ್ ಆಗಿರುವ ಎಂ.ಕೆ. ಶಶಿಕುಮಾರ್ ಉ. ಪೃಥ್ವಿ ಕೋಟ್ಯಂತರ ರು. ವಂಚನೆ ಮಾಡಿದ್ದು, ಈತನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಗುಂಡ್ಲುಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಕೆ. ಶಶಿಕುಮಾರ್ ತಮ್ಮ ಹೆಸರಿಗೆ ೧೬ ಲಕ್ಷ, ಅವನ ತಮ್ಮ ಎಂ.ಕೆ. ವಿನಯ್‌ಕುಮಾರ್ ಹೆಸರಿಗೆ ೨೦ ಲಕ್ಷವನ್ನು ಯಾರ ಅನುಮತಿ ಇಲ್ಲದೆ ವರ್ಗಾವಣೆ ಮಾಡಿಕೊಂಡಿದ್ದು, ತಮಗೆ ಬೇಕಾದ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದು, ಈತನ ಮೇಲೆ ಈಗ ೪೨೦ ಕೇಸು ದಾಖಲಾಗಿ ತನಿಖಾ ಹಂತದಲ್ಲಿದೆ, ಆದರೆ ಈತ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಕೋರ್ಟಿಗೆ ಶರಣಾಗಿದ್ದಾನೆ. ಆದ್ದರಿಂದ ಈತನ ಮೇಲೆ ಸೂಕ್ತಕ್ರಮ ಕೈಗೊಂಡು ವಂಚನೆಗೆ ಒಳಗಾಗಿರುವವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.೧೪ ದಿನದಿಂದ ನ್ಯಾಯಾಂಗ ಬಂಧನದಲ್ಲಿರುವ ಶಶಿಕುಮಾರ್ ಇದುವರೆಗೂ ಬ್ಯಾಂಕಿನ ದಾಖಲಾತಿ ಪುಸ್ತಕ, ಲೆಡ್ಜರ್, ಸ್ಕ್ರೋಲ್ ಬುಕ್, ಕಂಪ್ಯೂಟರ್, ಪೀಠೋಪಕರಣಗಳು ಹಾಗೂ ಯಾವುದೇ ಷೇರುದಾರರ ದಾಖಲಾತಿಗಳನ್ನು ನೀಡದೇ ಸತಾಯಿಸುತ್ತಿದ್ದಾನೆ ಎಂದರು.ಈ ಸೊಸೈಟಿಯಲ್ಲಿ ಷೇರುದಾರರಾಗಿ, ವ್ಯವಹಾರ ನಡೆಸಿ, ಮೋಸವಾಗಿದ್ದಲ್ಲಿ ತಕ್ಷಣ ಪಟ್ಟಣ ಪೊಲೀಸ್ ಠಾಣೆಗಾಗಲಿ, ನಮಗಾಗಲಿ ದಾಖಲೆಗಳನ್ನು ನೀಡಿದರೆ ಹಣ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಈ ಸೊಸೈಟಿಯಲ್ಲಿ ೪೦೦ಕ್ಕೂ ಹೆಚ್ಚು ಜನ ಷೇರುದಾರರು, ಪಿಗ್ಮಿ ಕಟ್ಟಿರುವವರು, ಫಿಕ್ಸೆಡ್‌ ಡಿಪಾಸಿಟ್ ಹಾಗೂ ಉಳಿತಾಯ ಖಾತೆ ಹೊಂದಿರುವವರಿದ್ದು ಕೋಟಿಗಟ್ಟಲೆ ಹಣ ಮೋಸವಾಗುವ ಆತಂಕ ಇದ್ದು ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.ಇದರ ಮುಖ್ಯ ಕಚೇರಿ ಬೆಳಗಾವಿಯಲ್ಲಿದ್ದು ಇದನ್ನು ೨ ವರ್ಷದ ಹಿಂದೆ ಮುಚ್ಚಿದ್ದರೂ, ಎಂ.ಕೆ. ಶಶಿಕುಮಾರ್ ಯಾವುದನ್ನು ತಿಳಿಸದೇ ವ್ಯವಹಾರ ಮಾಡಿ ಜನರಿಗೆ ಮೋಸ ಮಾಡಿದ್ದಾನೆ. ಅತಿ ಹೆಚ್ಚು ಮೊತ್ತವನ್ನು ಇಟ್ಟಿದ್ದ ಗುರುಪ್ರಸಾದ್ ಅವರಿಗೆ ನೀಡಿದ್ದ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನವನ್ನೇ ಆಡಳಿತ ಮಂಡಳಿ ಎಂದು ಬಿಂಬಿಸಿ ಹಣ ಲೂಟಿ ಮಾಡಿದ್ದಾನೆ ಎಂದರು. ಇದೇ ಕೋ ಆಪರೇಟಿವ್ ಸೊಸೈಟಿಯಲ್ಲಿ ಚಿಟ್ ಫಂಡ್ ವ್ಯವಹಾರ ಕೂಡ ನಡೆಸಿದ್ದು ಅದರಿಂದ ಬಂದ ಲಾಭ ಹಾಗೂ ಸುಮಾರು ಗ್ರಾಹಕರ ಹಣವನ್ನು ಕೂಡ ಈತ ದುರುಪಯೋಗ ಪಡಿಸಿಕೊಂಡಿರುತ್ತಾನೆ.

ಪೊಲೀಸ್ ಇಲಾಖೆ ಇದುವರೆಗೆ ಈತನಿಂದ ಯಾವುದೇ ದಾಖಲಾತಿಗಳನ್ನು ವಶಪಡಿಸಿಕೊಳ್ಳದೇ ಇರುವುದು ಹಾಗೂ ಆಡಳಿತ ಮಂಡಳಿ ಹಾಗೂ ಸಂಸ್ಥಾಪಕ ಆರ್.ಆರ್.ಪಾಟೀಲ್ ಯಾರನ್ನು ಕೂಡ ಬಂಧಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈತ ಸಾರ್ವಜನಿಕರಿಗೆ ಮಾಡಿರುವ ಮೋಸವನ್ನು ಈಗಾಗಲೇ ಸ್ಥಳೀಯ ಶಾಸಕರು ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು ಇದುವರೆಗೆ ಅವರು ಯಾವುದೇ ಕ್ರಮವನ್ನು ವಹಿಸಿರುವುದಿಲ್ಲ ಮತ್ತು ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಸಹಕಾರ ಸಚಿವರಿಗೆ ಸಹಕಾರ ಸಂಘಗಳ ಕಮಿಷನರ್ ಅವರಿಗೆ ಕೂಡ ಪತ್ರ ಬರೆಯಲಾಗಿದ್ದು ಯಾರೂ ಕೂಡ ಈ ವಿಚಾರವಾಗಿ ಕ್ರಮ ವಹಿಸಿರುವುದಿಲ್ಲ.

ಬೆಳಗಾವಿಯ ಮುಖ್ಯ ಕಚೇರಿಗೆ ವಿಶೇಷ ಅಧಿಕಾರಿಯನ್ನು ನೇಮಿಸಿದ್ದು ಅವರ ಮೂಲಕ ಹಾಗೂ ಇವರೆಲ್ಲರ ಮೇಲೆ ಕೆಪಿಐಡಿ ಹಾಗೂ ೪೨೦ ಯ್ಯಾಟ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಹಲವು ಪೊರ್ಜರಿ ದಾಖಲಾತಿಗಳನ್ನು ಸೃಷ್ಟಿ ಮಾಡಿ ತನಿಖೆಯ ದಿಕ್ಕು ತಪ್ಪಿಸುತ್ತಿರುವ ಎಂ ಕೆ ಶಶಿಕುಮಾರ್ ವಿರುದ್ಧ ಫೋರ್ಜರಿ ಕೇಸ್ ದಾಖಲಿಸಿ ಇದಕ್ಕೆ ಸಂಬಂಧ ಪಟ್ಟವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ನೊಂದವರಿಗೆ ಹಣ ಕೊಡಿಸಬೇಕು. ತಪ್ಪಿತಸ್ತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆಯನ್ನು ರೈತಸಂಘ ಒತ್ತಾಯಿಸಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಂದಕೆರೆ ಸಂಪತ್ತು, ಮಹೇಶ್, ಸಿದ್ದರಾಜು, ಶಿವಣ್ಣ, ತಂಗವೇಲು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ