ಹಾನಗಲ್ಲ : ಕೃಷಿ ಇಲಾಖೆ ಆಯೋಜಿಸಿದ ರೈತ ಸಂಘಗಳು, ಕೃಷಿ ಪರಿಕರ ಮಾರಾಟಗಾರರು, ರೈತರ ಸಭೆ ಗೊಂದಲದ ಗೂಡಾಗಿ, ರೈತರು ಸಭೆಯಿಂದ ಹೊರ ನಡೆದ ಪರಿಣಾಮವಾಗಿ ಸಭೆಯೆ ಮುಂದೂಡಿತು.
ಸಭೆಗೆ ತಾಲೂಕಿನ ೧೫೨ ಕೃಷಿ ಪರಿಕರ ಮಾರಾಟಗಾರರು ಆಗಮಿಸಬೇಕಾಗಿತ್ತು. ಆದರೆ ಕೆಲವೇ ಕೆಲವು ಮಾರಾಟಗಾರರು ಬಂದಿರುವುದನ್ನು ಗಮನಿಸಿದ ರೈತ ಸಂಘದ ತಾಲೂಕು ಕಾರ್ಯದರ್ಶಿ ರುದ್ರಪ್ಪ ಹಣ್ಣಿ ಸಭೆ ನಡೆಸುತ್ತಿರುವುದೇ ಅಪ್ರಸ್ತುತ. ಕಳೆದ ವರ್ಷವೂ ಕೂಡ ಹೀಗೇ ಪರಿಕರ ಮಾರಾಟಗಾರರು ಸರಿಯಾದ ಸಂಖ್ಯೆಯಲ್ಲಿ ಇಲ್ಲದೆ ಸಭೆ ನಡೆಸಲು ಮುಂದಾಗಿ ಸಭೆ ಮುಂದೂಡಿತ್ತು. ಮತ್ತೆ ಅದೇ ಕ್ರಮಕ್ಕೆ ಕೃಷಿ ಅಧಿಕಾರಿಗಳು ಮುಂದಾಗಿದ್ದಾರೆ. ಇದು ಜಾಣ ಕುರುಡು ನೀತಿ. ಇದನ್ನು ನಾವು ಪ್ರತಿಭಟಿಸುತ್ತೇವೆ. ರೈತರನ್ನು ಕರೆದು ಕಾಟಾಚಾರಕ್ಕೆ ಸಭೆ ಮಾಡುವುದಾದರೆ ಸಭೆಯ ಅಗತ್ಯವೇನು ಎಂದು ತರಾಟೆಗೆ ತೆಗೆದುಕೊಂಡರು. ರೈತರು ಸಭೆಯಿಂದ ಹೊರನಡೆಯಲು ಮುಂದಾದರು.
ಮಧ್ಯೆ ಪ್ರವೇಶಿಸಿದ ಜಿಲ್ಲಾ ಕೃಷಿ ಉಪನಿರ್ದೇಶಕ ಶಿವಕುಮಾರ ಮಲ್ಲಾಡದ ಈಗ ಈ ಸಭೆ ನಡೆಸೋಣ. ಮತ್ತೊಂದು ಸಭೆ ಕರೆಯೋಣ. ಈಗ ಈ ಸಭೆಗೆ ಬಾರದ ಪರಿಕರ ಮಾರಾಟಗಾರರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸೋಣ ಎಂದು ಸಭೆಯನ್ನು ನಡೆಸಲು ಅನುಮತಿ ಕೇಳಿದರು. ಆದರೆ ರೈತರು ಅದನ್ನು ಒಪ್ಪದೇ ಸಭೆ ಮುಂದೂಡುವಂತೆ ಬಲವಾಗಿ ಒತ್ತಾಯಿಸಿದರು.ನಂತರ ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ, ರೈತ ಸಂಘದ ಇಬ್ಬರು ಅಧ್ಯಕ್ಷರಾದ ಮರಿಗೌಡ ಪಾಟೀಲ, ಎಂ.ಎಸ್. ಪಾಟೀಲ, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೃಷಿಕ ಸಮಾಜದ ಅಧ್ಯಕ್ಷ ಕೆ.ಟಿ. ಕಲಗೌಡರ ನಡುವೆ ಚರ್ಚೆ, ಮಾತಿನ ಚಕಮಕಿ ನಡೆದು ಅಂತಿಮವಾಗಿ ಸಭೆ ಮುಂದೂಡಲು ನಿರ್ಣಯಿಸಲಾಯಿತು.
ಜಿಲ್ಲಾ ಕೃಷಿ ಉಪನಿರ್ದೇಶಕ ಶಿವಕುಮಾರ ಮಲ್ಲಾಡದ, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ತಾಲೂಕು ಗ್ಯಾರಂಟಿ ಸಮಿದಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಡಿಪಿ ಸದಸ್ಯೆರಾದ ಮಹಮ್ಮದಹನಿಫ್ ಬಂಕಾಪೂರ, ರಾಜು ಜೋಗಪ್ಪನವರ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ.ಕೃಷಿಕ ಸಮಾಜದ ಅಧ್ಯಕ್ಷ ಕೆ.ಟಿ. ಕಲಗೌಡರ, ರೈತ ಸಂಘದ ಅಧ್ಯಕ್ಷರಾದ ಮರಿಗೌಡ ಪಾಟೀಲ, ಎಂ.ಎಸ್. ಪಾಟೀಲ, ಚನ್ನಬಸಪ್ಪ ಹಾವಣಗಿ, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಮಹೇಶ ಬಣಕಾರ, ಸಂಕನಗೌಡ ದೇವೀಕೊಪ್ಪ, ಶಿವಲಿಂಗಪ್ಪ ತಲ್ಲೂರ, ಪಂಚಾಕ್ಷರಿಗೌಡ ಪಾಟೀಲ, ಬಿ.ವಿ.ಶಿರಡಿಮಠ, ಬಸವರಾಜ ಉತ್ತಂಗಿ ಮೊದಲಾದವರು ಈ ಸಂದರ್ಭದಲ್ಲಿದ್ದರು.