ಧಾರವಾಡ:
ಹದಿಹರೆಯ ವಿದ್ಯಾರ್ಥಿ ಜೀವನದ ವಸಂತ ಕಾಲ. ಈ ಕಾಲದಲ್ಲಿ ಅವರಿಗೆ ಪಾಲಕರು ಮತ್ತು ಶಿಕ್ಷಕರು ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಕಲಘಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಹದಿಹರೆಯದ ಸಮಸ್ಯೆಗಳು ಹಾಗೂ ಪರಿಹಾರ’ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹದಿಹರೆಯದಲ್ಲಿ ವಿದ್ಯಾರ್ಥಿಗಳಲ್ಲಿ ಶಾರೀರಿಕ, ಭಾವನಾತ್ಮಕವಾಗಿ ಬದಲಾವಣೆ ಆಗುವುದರಿಂದ ಆತಂಕ, ಖಿನ್ನತೆಗೆ ಒಳಗಾಗುತ್ತಾರೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ದಾರಿ ತಪ್ಪುವ ಸಂದರ್ಭಗಳೇ ಹೆಚ್ಚು. ಸ್ನೇಹಿತರ ಒತ್ತಡದಿಂದ ದುಶ್ಚಟಗಳ ದಾಸರೂ ಆಗಬಹುದು. ಕಲಿಕೆಯಲ್ಲಿ ನಿರಾಸಕ್ತಿ, ಭಾವೋದ್ವೇಗ, ಹಿಂಸಾಚಾರ ಹಾಗೂ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಬಹುದು. ವಿದ್ಯಾರ್ಥಿಗಳಲ್ಲಿ ಆದಮ್ಯ ಶಕ್ತಿ ಇದ್ದು ಅದನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕೆಂದು ಹೇಳಿದರು.ಕವಿವ ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಮಾತನಾಡಿ, ವಿದ್ಯಾರ್ಥಿಗಳು ದೇಶದ ನಿಜವಾದ ಸಂಪತ್ತು. ಹದಿಹರೆಯ ವಿದ್ಯಾರ್ಥಿ ಜೀವನದ ಪ್ರಕ್ಷುಬ್ಧ ಅವಧಿ. ಹದಿಹರೆಯದಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೇ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು. ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದರು.ಹದಿಹರೆಯದ ಮನೋತಜ್ಞೆ ಡಾ. ಸುಜ್ಞಾನಿದೇವಿ ಪಾಟೀಲ, ಚಟುವಟಿಕೆ ಸಂವಾದದ ಮೂಲಕ ಹದಿಹರೆಯದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎನ್. ಎಂ.ಸಂಗಮನವರ, ಕವಿವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಹೇಶ ಹೊರಕೇರಿ, ಪ್ರೊ. ಕೆ.ಎಸ್. ಪಾಟೀಲ, ಪ್ರೊ. ಮಂಜುನಾಥ ಕುರಿ ಇದ್ದರು.2ಎಚ್‌ಯುಬಿ1