ಹಾನಗಲ್ಲ: ಅನಿರೀಕ್ಷಿತವಾಗಿ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾದ ನನಗೆ ಈ ತಾಲೂಕಿನ ಜನ ನೀಡಿದ ವಿಶ್ವಾಸಕ್ಕೆ ಬದ್ಧನಾಗಿ ಜನರ ಸೇವೆ ಮಾಡುತ್ತಿದ್ದೇನೆ, ಇದೇ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಹಾನಗಲ್ಲ ತಾಲೂಕಿನ ಹೀರೂರಿನಲ್ಲಿ ತಾಲೂಕು ಆಡಳಿತ ಆಯೋಜಿಸಿದ ದಾಖಲೆ ರಹಿತವಾಗಿ ವಾಸಿಸುತ್ತಿದ್ದ ಮನೆ ಮಾಲೀಕರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ೨೦೨೧ರಲ್ಲಿ ಹಾನಗಲ್ಲ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ನಡೆದ ಉಪ ಚುನಾವಣೆಯಲ್ಲಿ ಜನತೆ ವಿಶ್ವಾಸವಿಟ್ಟು ನನ್ನ ಕೈ ಹಿಡಿದರು. ಆ ಸಂದರ್ಭದಲ್ಲಿ ಕೇವಲ ೧೮ ತಿಂಗಳು ಮಾತ್ರ ಕಾಲಾವಧಿ ಇತ್ತು. ೨೦೨೩ರಲ್ಲಿ ತಾಲೂಕಿನಲ್ಲಿ ಜನರ ಸಂಕಷ್ಟ, ಸಾರ್ವಜನಿಕ ಸಮಸ್ಯೆಗಳನ್ನು ಕಣ್ಣಾರೆ ತಿಳಿಯುವ ಉದ್ದೇಶದಿಂದ ದೃಢಸಂಕಲ್ಪ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳು ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ಯಾವುದೇ ದಾಖಲೆ ಇಲ್ಲದೇ ಭಯ ಮತ್ತು ಆತಂಕದಲ್ಲಿ ಜೀವನ ನಡೆಸುತ್ತಿರುವುದು ತಿಳಿಯಿತು. ಆ ಸಂದರ್ಭದಲ್ಲಿ ಇವೆಲ್ಲ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವ ದೊರಕಿಸುವ ದೃಢಸಂಕಲ್ಪ ಮಾಡಲಾಯಿತು. ಆ ಸಂಕಲ್ಪವೀಗ ಈಡೇರುತ್ತಿದ್ದು, ಮನೆ ಮಾಲಿಕತ್ವಕ್ಕೆ ಕಳೆದ ೨ ತಲೆಮಾರಿನಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕುಟುಂಬಗಳಲ್ಲಿ ಕಂಡು ಬರುತ್ತಿರುವ ಸಂತಸ ನನ್ನ ರಾಜಕೀಯ ಜೀವನದ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಒಬ್ಬ ರಾಜಕಾರಣಿಗೆ ಇದಕ್ಕಿಂತ ಬೇರೆ ಯಾವ ಖುಷಿಯೂ ಇಲ್ಲ ಎಂದು ಹೇಳಿದರು. ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ತಾವು ವಾಸಿಸುತ್ತಿರುವ ಮನೆಗಳನ್ನು ತೆರವುಗೊಳಿಸಿ ತಮ್ಮನ್ನು ಬೀದಿಯಲ್ಲಿ ತಂದು ನಿಲ್ಲಿಸುತ್ತಾರೆ ಎನ್ನುವ ಆತಂಕದಲ್ಲಿಯೇ ಕುಟುಂಬಗಳು ಕಾಲ ಕಳೆಯುವಂತಾಗಿತ್ತು. ಆದರೀಗ ಆತಂಕ ದೂರವಾಗಿದ್ದು, ಹಕ್ಕುಪತ್ರ, ನೋಂದಣಿ ಪತ್ರ, ಇಸ್ವತ್ತು ಹೀಗೆ ಶಾಶ್ವತ ದಾಖಲೆಗಳನ್ನು ಒದಗಿಸಲಾಗಿದೆ. ಆದಷ್ಟು ಬೇಗ ಸರ್ಕಾರದಿಂದ ಅನುಮೋದನೆಗೊಂಡ ಎಲ್ಲ ಫಲಾನುಭವಿಗಳಿಗೂ ಮಾಲಿಕತ್ವ ನೀಡಲಾಗುವುದು. ಎಂದು ತಿಳಿಸಿದರು.ಹಿರೂರು ಗ್ರಾಮದ ೧೨೮, ಹನುಮನಕೊಪ್ಪ ೧೬೨, ಬಾಳಿಹಳ್ಳಿ ೧೫೦, ಸಾವಿಕೇರಿ ೨೭, ಹರಳಕೊಪ್ಪ ೬೩, ಶೃಂಗೇರಿ ೧೬, ಲಕ್ಷ್ಮೀಪುರ ೧೩೫, ಡೊಳ್ಳೇಶ್ವರ ೧೧೪, ಜಂಗಿನಕೊಪ್ಪ ೧೭ ಹಾಗೂ ಅಜಗುಂಡಿಕೊಪ್ಪ ಗ್ರಾಮಗಳ ೧೦ ಸೇರಿದಂತೆ ಒಟ್ಟು ೮೨೨ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಹಾನಗಲ್ ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ ಇದ್ದರು.
ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಬಂದ ಅಭ್ಯರ್ಥಿ ನಾನು: ಶ್ರೀನಿವಾಸ ಮಾನೆ
. ಅನಿರೀಕ್ಷಿತವಾಗಿ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾದ ನನಗೆ ಈ ತಾಲೂಕಿನ ಜನ ನೀಡಿದ ವಿಶ್ವಾಸಕ್ಕೆ ಬದ್ಧನಾಗಿ ಜನರ ಸೇವೆ ಮಾಡುತ್ತಿದ್ದೇನೆ, ಇದೇ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.