ಬೇವಿನಹಳ್ಳಿ ಪಿಡಿಓಯಿಂದಲೇ ಕೃಷಿ ಭೂಮಿ ಅನ್ಯಕ್ರಾಂತ

KannadaprabhaNewsNetwork |  
Published : May 22, 2026, 01:45 AM IST
೨೧ಕೆಎಂಎನ್‌ಡಿ-೪ಮಂಡ್ಯ ತಾಲೂಕು ಬೇವಿನಹಳ್ಳಿ ಗ್ರಾಪಂಗೆ ದಿಢಿ್‌ೂ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಇದರಿಂದ ಕೆರಳಿದ ಲೋಕಾಯುಕ್ತರು ಪಿಡಿಒ ಚಾಮರಾಜು, ತಾಪಂ ಇಒ ಲೋಕೇಶಮೂರ್ತಿ ಮತ್ತು ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಅವರನ್ನು ತರಾಟೆಗೆ ತೆಗೆದುಕೊಂಡು ನೀವು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸುವುದಿಲ್ಲವೇ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೃಷಿ ಜಮೀನನ್ನು ಅನ್ಯಕ್ರಾಂತ (ಭೂ ಪರಿವರ್ತನೆ) ಮಾಡುವ ಅಧಿಕಾರವಿರುವುದು ಜಿಲ್ಲಾಧಿಕಾರಿಗೆ ಮಾತ್ರ. ಆದರೆ, ಜಿಲ್ಲಾಧಿಕಾರಿಯನ್ನು ಪಕ್ಕಕ್ಕಿಟ್ಟು ಪಿಡಿಒವೊಬ್ಬರು ಕೃಷಿ ಭೂಮಿಯನ್ನು ಭೂ ಪರಿವರ್ತನೆ ಮಾಡಿರುವ ಅಪರೂಪದ ಪ್ರಕರಣವೊಂದು ಬೇವಿನಹಳ್ಳಿ ಗ್ರಾಮ ಪಂಚಾಯಿತಿಯಿಂದ ಬೆಳಕಿಗೆ ಬಂದಿದೆ.

ಪಿಡಿಒ ಚಾಮರಾಜು ಅವರೇ ಅನ್ಯಕ್ರಾಂತ (ಭೂಪರಿವರ್ತನೆ) ಮಾಡುವುದರ ಜೊತೆಗೆ ಕೃಷಿ ಭೂಮಿಯಲ್ಲಿ ಕಟ್ಟಡ ಕಟ್ಟಿದ ನಂತರ ಪರವಾನಗಿ ನೀಡಿ, ವಾಣಿಜ್ಯ ವ್ಯವಹಾರಕ್ಕೆ ಅನುಮತಿ ನೀಡಿರುವ ಸಂಗತಿಗಳು ಉಪ ಲೋಕಾಯುಕ್ತರು ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಬಯಲಾಗಿವೆ. ಈ ಸಮಯದಲ್ಲಿ ಪಂಚಾಯಿತಿಯ ಆಡಳಿತದಲ್ಲಿನ ಲೋಪ, ಭ್ರಷ್ಟಾಚಾರ ಕಂಡು ಅಧಿಕಾರಿ ಮತ್ತು ನೌಕರರನ್ನು ತರಾಟೆ ತೆಗೆದುಕೊಂಡರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೆ ಡಿ- ಅಡಿಕ್ಷನ್ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಪಿಡಿಒ ಚಾಮರಾಜು ಉತ್ತರಿಸಲು ತಡಬಡಾಯಿಸಿದರು. ಕೃಷಿ ಭೂಮಿಯನ್ನು ಭೂಪರಿವರ್ತನೆ ಮಾಡದೆ ಹೇಗೆ ಅನುಮತಿ ನೀಡಲು ಸಾಧ್ಯ ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು. ಭೂಪರಿವರ್ತನೆ ಆಗದ ಹೊರತು ಇತರೆ ಉದ್ದೇಶಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಉತ್ತರಿಸಿದರು.

ಇದರಿಂದ ಕೆರಳಿದ ಲೋಕಾಯುಕ್ತರು ಪಿಡಿಒ ಚಾಮರಾಜು, ತಾಪಂ ಇಒ ಲೋಕೇಶಮೂರ್ತಿ ಮತ್ತು ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಅವರನ್ನು ತರಾಟೆಗೆ ತೆಗೆದುಕೊಂಡು ನೀವು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸುವುದಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಆಗಾಗ್ಗೆ ಬೇವಿನಹಳ್ಳಿ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ತಿಳಿಸಿದರು. ಪಂಚಾಯಿತಿಯಲ್ಲಿ ನೀವು ಭೇಟಿ ನೀಡಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಯಾವುದೇ ಉತ್ತರ ನೀಡದೆ ಸುಮ್ಮನಾದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಲವಾರು ಅವ್ಯವಹಾರದಲ್ಲಿ ಪಾಲುದಾರರಾಗಿರುವುದನ್ನು ದಾಖಲೆಗಳು ಸಾಕ್ಷೀಕರಿಸಿದವು. ಅಧಿಕಾರಿಗಳು, ನೌಕರರು, ಸಿಬ್ಬಂದಿಯ ಕಾರ್ಯವೈಖರಿಯನ್ನು ಕಂಡು ಉಪಲೋಕಾಯುಕ್ತರು ಹಿಗ್ಗಾಮುಗ್ಗಾ ಜಾಡಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹೧.೭೦ ಕೋಟಿ ತೆರಿಗೆ ಸಂಗ್ರಹವಾಗಿದೆ. ಇನ್ನೂ ₹೧ ಕೋಟಿಗೂ ಹೆಚ್ಚಿನ ಹಣ ವಸೂಲಾತಿಯಾಗಬೇಕಿದ್ದು, ಏಕೆ ವಸೂಲಿ ಮಾಡಿಲ್ಲ ಎಂದು ಪ್ರಶ್ನಿಸಿದರು. ನಗದು ವಹಿಯಲ್ಲಿ ₹೪ ಲಕ್ಷ ತೆರಿಗೆ ಹಣ ವಸೂಲಿಯಾಗಿದ್ದರ ಬಗ್ಗೆ ನೋಂದಣಿ ಪುಸ್ತಕದಲ್ಲಿ ದಾಖಲಿಸಲಾಗಿದ್ದರೂ ₹೨ ಲಕ್ಷ ಹಣವನ್ನು ಬ್ಯಾಂಕಿಗೆ ಪಾವತಿ ಮಾಡದೆ ಲೋಪವೆಸಗಿರುವುದು ಕಂಡುಬಂದಿತು.

ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಒಂದು ಕೆರೆ ಇದ್ದು, ಅದನ್ನು ಧರ್ಮಸ್ಥಳ ಸಂಸ್ಥೆ ವತಿಯಿಂದ ಹೂಳು ತೆಗೆಸಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಯಾವುದೇ ಒತ್ತುವರಿಯಾಗಿಲ್ಲ ಎಂದು ಪಿಡಿಒ ಉತ್ತರಿಸಿದಾಗ ಸುಳ್ಳು ಹೇಳಿದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದರು.

ಎಲ್ಲ ದಾಖಲೆಗಳನ್ನೂ ಪರಿಶೀಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಉಪಲೋಕಾಯುಕ್ತರು, ಇಲ್ಲಿ ಪಿಡಿಒನೇ ಎಲ್ಲ ಕಾರ್ಯಗಳನ್ನೂ ಮಾಡಿದ್ದಾರೆ. ಹಾಗಾಗಿ ಪಿಡತೊಓ ಚಾಮರಾಜು, ತಾಪಂ ಇಒ ಲೋಕೇಶ್‌ಮೂರ್ತಿ, ಜಿಪಂ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭರಾಣಿ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

---

ಹೆಚ್ಚಿನ ವಾಹನಗಳು ಬರುವುದು ಬೇಡ: ಬಿ.ವೀರಪ್ಪ

ಮಂಡ್ಯ : ಹೆಚ್ಚಿನ ವಾಹನಗಳು ನನ್ನೊಂದಿಗೆ ಫಾಲೋ ಮಾಡುವುದು ಬೇಡ, ಅಗತ್ಯವಿರುವಷ್ಟು ಮಂದಿ ಮಾತ್ರ ಬನ್ನಿ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಧಿಕಾರಿಗಳಿಗೆ ತಿಳಿಸುವ ಮೂಲಕ ಪ್ರಧಾನಿ ಮೋದಿಯವರು ಕರೆಗೆ ಸ್ಪಂದಿಸಿದ್ದು ವಿಶೇಷವಾಗಿತ್ತು. ಉಪ ಲೋಕಾಯುಕ್ತರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಶೋಭಾರಾಣಿ ಅವರು ಲೋಕಾಯುಕ್ತರ ಕಾರಿನಲ್ಲಿ ಪ್ರಯಾಣಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗುವಳಿ ಚೀಟಿಗಾಗಿ ಭೂ ಹಕ್ಕುದಾರರ ವೇದಿಕೆ ಪ್ರತಿಭಟನೆ
ಎಚ್‌ಸಿಜಿ ಸಂಸ್ಥೆಯಿಂದ ಉತ್ತರ ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಶುಭಾರಂಭ,