ಸಮಾಜ ಬದಲಾಗದಿದ್ದರೆ ಗುಲಾಮಗಿರಿ ಬರುತ್ತೆ: ಬಿ.ವೀರಪ್ಪ

KannadaprabhaNewsNetwork |  
Published : May 22, 2026, 01:30 AM IST
೨೧ಕೆಎಂಎನ್‌ಡಿ-೧ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಮಂಡ್ಯ ಮತ್ತು ಮಳವಳ್ಳಿ ತಾಲೂಕಿಗೆ ಸಂಬಂಧಿಸಿದ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉಪ ಲೋಕಾಯುಕ್ತ ಬಿ.ವೀರಪ್ಪ ಮಾತನಾಡಿದರು. | Kannada Prabha

ಸಾರಾಂಶ

ವಿಧಾನಸೌಧದಲ್ಲಿರುವವರು ನೆಟ್ಟಗಿದ್ದಿದ್ದರೆ ನಮ್ಮ ಅಗತ್ಯವೇ ಇರುತ್ತಿರಲಿಲ್ಲ. ಚುನಾವಣೆ ವೇಳೆ ಹಣ ಪಡೆದು ಓಟು ಹಾಕುತ್ತೀರಿ, ನಂತರ ಅದರ ಪರಿಣಾಮವನ್ನು ಎದುರಿಸುತ್ತೀರಿ. ಎಲ್ಲಿಯವರೆಗೆ ನೀವು ಹಣ ಪಡೆದು ಓಟು ಹಾಕುವಿರೋ, ಅಲ್ಲಿಯವರೆಗೂ ಸಮಾಜ ಉದ್ಧಾರವಾಗುವುದಿಲ್ಲ. ಹಾಗಾಗಿ ನಾವು ಯಾರನ್ನು ಆಯ್ಕೆ ಮಾಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿರುವ ಜನರು ಬದಲಾಗಬೇಕು, ನಾವೆಂತಹ ಜನರನ್ನು ಆಯ್ಕೆ ಮಾಡುತ್ತಿದ್ದೇವೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ನಾವು ಗುಲಾಮಗಿರಿಗೆ ಒಳಗಾಗಬೇಕಾಗುತ್ತದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಎಚ್ಚರಿಸಿದರು.

ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಂಡ್ಯ ಮತ್ತು ಮಳವಳ್ಳಿ ತಾಲೂಕಿಗೆ ಸಂಬಂಧಿಸಿದ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನಸೌಧದಲ್ಲಿರುವವರು ನೆಟ್ಟಗಿದ್ದಿದ್ದರೆ ನಮ್ಮ ಅಗತ್ಯವೇ ಇರುತ್ತಿರಲಿಲ್ಲ. ಚುನಾವಣೆ ವೇಳೆ ಹಣ ಪಡೆದು ಓಟು ಹಾಕುತ್ತೀರಿ, ನಂತರ ಅದರ ಪರಿಣಾಮವನ್ನು ಎದುರಿಸುತ್ತೀರಿ. ಎಲ್ಲಿಯವರೆಗೆ ನೀವು ಹಣ ಪಡೆದು ಓಟು ಹಾಕುವಿರೋ, ಅಲ್ಲಿಯವರೆಗೂ ಸಮಾಜ ಉದ್ಧಾರವಾಗುವುದಿಲ್ಲ. ಹಾಗಾಗಿ ನಾವು ಯಾರನ್ನು ಆಯ್ಕೆ ಮಾಡುತ್ತಿದ್ದೇವೆ, ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಬೇಕು. ಈ ವಿಚಾರವಾಗಿ ನಾವು ಆತ್ಮವಿಮರ್ಶೆ ಮಾಡಿಕೊಳ್ಳದಿದ್ದರೆ ನಮಗೂ ಪ್ರಾಣಿಗಳಿಗೂ ವ್ಯತ್ಯಾಸವೇ ಇರುವುದಿಲ್ಲ ಎಂದು ಕಠಿಣವಾಗಿ ಹೇಳಿದರು.

ಸಮಾಜದ ವ್ಯವಸ್ಥೆಯಲ್ಲಿ ಅಧಿಕಾರಿಗಳ ಧೋರಣೆಗಳೂ ಬದಲಾಗಬೇಕಿದೆ, ಸರ್ಕಾರಿ ಹುದ್ದೆ ಎನ್ನುವುದು ಭ್ರಷ್ಟಾಚಾರಕ್ಕೆ ನೀಡುತ್ತಿರುವ ಪರವಾನಗಿ ಎಂಬಂತಾಗಿದೆ. ಹಣ ಮಾಡುವುದನ್ನೇ ಅಧಿಕಾರಿಗಳು ಪ್ರಮುಖ ಗುರಿಯಾಗಿಸಿಕೊಂಡಿದ್ದಾರೆ, ಪ್ರಾಮಾಣಿಕ ಅಧಿಕಾರಿಗಳಿದ್ದರೂ ಅವರ ಸಂಖ್ಯೆ ತೀರಾ ಕಡಿಮೆ ಇದೆ. ನಾವು ಹೊಟ್ಟೆಗೆ ತಿನ್ನುವುದು ಅನ್ನವೇ ಹೊರತು ಹಣವಲ್ಲ. ಅನ್ಯಾಯದ ದುಡ್ಡು ಮಚ್ಚೆ ಇದ್ದಂತೆ, ಅದು ಏನು ಮಾಡಿದರೂ ಹೋಗುವುದಿಲ್ಲ. ಅನ್ಯಾಯದ ಹಣದಿಂದ ನಮ್ಮ ಬದುಕಿನಲ್ಲಿ ಋಣಾತ್ಮಕ ಶಕ್ತಿ ಸೃಷ್ಟಿಯಾಗುತ್ತದೆ. ಅದು ನಮ್ಮ ಹಾಗೂ ನಮ್ಮ ಮಕ್ಕಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಅದರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳನ್ನು ಎಚ್ಚರಿಸಿದರು.

ಅನ್ಯಾಯದ ಸಂಪಾದನೆಯನ್ನು ಇಂದಿಗೆ ಬಿಡಿ, ನಾಳೆಯಿಂದ ಒಳ್ಳೆಯ ಅಧಿಕಾರಿಗಳಾಗಿ ಕೆಲಸ ಮಾಡಿ. ಕಾಯ, ವಾಚ, ಮನಸಾ ನಿಸ್ವಾರ್ಥದಿಂದ ಜನರ ಕೆಲಸಗಳನ್ನು ಮಾಡಿಕೊಡಿ. ಎಷ್ಟೇ ಹಣ ಬಂದರೂ ತೃಪ್ತಿ ಇರುವುದಿಲ್ಲ. ಜನರಿಗೆ ಮಾಡಿಕೊಡುವ ಕೆಲಸದಲ್ಲಿ ಸಂತೃಪ್ತಿಯನ್ನು ಕಾಣಬೇಕು ಎಂದು ತಿಳಿಸಿದರು.

ಅಧಿಕಾರಿಗಳು ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ, ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಅದೇ ಭ್ರಷ್ಟರು ಎಂದು ಕಂಡುಬಂದರೆ ಅವರ ಕತ್ತಿಗೆ ಹಗ್ಗ ಹಾಕುತ್ತೇನೆ. ನೀವಾಗಿ ನೀವೆಯೇ ಎಚ್ಚೆತ್ತುಕೊಳ್ಳದಿದ್ದರೆ ಸೆಂಟ್ರಲ್ ಜೈಲಿಗೆ ಹೋಗುವುದಕ್ಕೆ ಸಿದ್ಧರಾಗಿ ಎಂದು ಮತ್ತೊಮ್ಮೆ ಎಚ್ಚರಿಕೆಯ ಮಾತುಗಳನ್ನಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ವ್ಯವಸ್ಥೆ ಉತ್ತಮವಾಗಿಲ್ಲ, ಕಡತಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಯಾರ ಹಿಡಿತದಲ್ಲಿ ಯಾರೂ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಪಿಡಿಓ ತಾನೇ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕ, ತಹಸೀಲ್ದಾರ್ ಎಂಬ ಮನೋಭಾವದಿಂದ ನಡೆದುಕೊಳ್ಳುತ್ತಿದ್ದಾರೆ. ನಿಮ್ಮೂರಿನ ಜನರ ಕೆಲಸ ಮಾಡಿಕೊಡುವುದಕ್ಕೆ ಬಂದಿರುವ ಕಷ್ಟವಾದರೂ ಏನು. ಅವರೇನು ಪಾಕಿಸ್ತಾನದಿಂದ ಬಂದಿದ್ದಾರೆಯೇ ಅಥವಾ ನೀವೇನಾದರೂ ಪಾಕಿಸ್ತಾನದಿಂದ ಬಂದಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಜನರ ಕೆಲಸ ಮಾಡುವ ಅಧಿಕಾರಿಗಳು ಏನಾದರೊಂದು ಸಾಧನೆ ಮಾಡಿ ಸಾಯಬೇಕು, ಸಾಧನೆ ಮಾಡಿ ಸಾಯದಿದ್ದರೆ ನಮ್ಮ ಸಾವಿಗೂ ಬೆಲೆ ಇರುವುದಿಲ್ಲ. ಪ್ರಕೃತಿ ಮತ್ತು ಪ್ರಾಣಿಗಳು ಮನುಷ್ಯನಿಗೆ ವಿರುದ್ಧವಾಗುತ್ತಿವೆ. ಇದನ್ನು ಸ್ವಾರ್ಥ ಪ್ರಾಣಿಯಾಗಿರುವ ಮನುಷ್ಯ ಅರ್ಥ ಮಾಡಿಕೊಂಡು ಬದುಕಬೇಕು. ಇಲ್ಲದಿದ್ದರೆ ವಿನಾಶ ಖಚಿತ ಎಂದು ಭವಿಷ್ಯ ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಲೋಕಾಯುಕ್ತ ಅಧಿಕಾರಿ ಅರವಿಂದ್, ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎಂ.ಆನಂದ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ನೀರಿಗಾಗಿ ಪರದಾಟ
ಶ್ವಾನ ಸಂತಾನಹರಣ ಕಾರ್ಯಕ್ಕೆ ಶಾಸಕ ಸಮರ್ಥ ಚಾಲನೆ