ಕೃಷಿ ಉತ್ಪನ್ನ ಮಾರುಕಟ್ಟೆ ಕೃಷಿಕರ ಸಂಪರ್ಕ ಹೊಂದಿರಲಿ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork |  
Published : Jun 22, 2025, 11:47 PM IST
ಫೊಟೊಪೈಲ್- ೨೦ಎಸ್ಡಿಪಿ೨- ಸಿದ್ದಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಭೀಮಣ್ಣ ನಾಯ್ಕ ಉದ್ಘಾಟಿಸಿದರು. ಎಂ.ಆರ್.ಕುಲಕರ್ಣಿ, ಮಂಗೇಶ ನಾಯ್ಕ, ಆಶಾ ಹಲಸ್ವಾರ ಮುಂತಾದವರಿದ್ದರು. | Kannada Prabha

ಸಾರಾಂಶ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಅನ್ನ ಕೊಡುವ ರೈತರಿಗೆ ವಿಶ್ವಾಸ ಮೂಡಿಸುವ, ನೆಮ್ಮದಿ ಮೂಡಿಸುವ ಕಾರ್ಯಗಳಲ್ಲಿ ಮುಂದಾಗಬೇಕಿದೆ.

ಸಿದ್ದಾಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಅನ್ನ ಕೊಡುವ ರೈತರಿಗೆ ವಿಶ್ವಾಸ ಮೂಡಿಸುವ, ನೆಮ್ಮದಿ ಮೂಡಿಸುವ ಕಾರ್ಯಗಳಲ್ಲಿ ಮುಂದಾಗಬೇಕಿದೆ. ಈಗಾಗಲೇ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಿತಿಗಳು ಇನ್ನಷ್ಟು ರೈತಪರವಾಗುವಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ೭ ನೂತನ ಗೋಡೌನ್‌ಗಳ ಉದ್ಘಾಟನೆ ಹಾಗೂ ಮಳೆನೀರು ಕೊಯ್ಲು ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವ್ಯಾಪಾರಸ್ಥರ ಮತ್ತು ರೈತರ ನಡುವಿನ ಕೊಂಡಿ. ರೈತರಿಗೆ ಸೂಕ್ತ ಧಾರಣೆ ಒದಗಿಸಿಕೊಡುವ, ತೂಕದಲ್ಲಿ ವ್ಯತ್ಯಾಸ ಆಗದಂತೆ ನಿರ್ವಹಿಸುವದರ ಜೊತೆಗೆ ಇನ್ನೂ ಹಲವು ಕೃಷಿ ಸಂಬಂಧಿತ ವ್ಯವಸ್ಥೆ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿವೆ. ಆದರೆ ರೈತರಿಗೆ ಸರ್ಕಾರದಿಂದ ದೊರಕುವ ಸೌಲಭ್ಯ, ಸವಲತ್ತುಗಳ ಹಾಗೂ ಕೃಷಿ ಕಾರ್ಯದಲ್ಲಿ ಅವಘಡಗಳಾದಾಗ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವಿನ ಕುರಿತಾದ ಮಾಹಿತಿಯನ್ನು ತಿಳಿಸುವ ಅತ್ಯಗತ್ಯತೆ ಇದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ಥಳೀಯ ಸಹಕಾರಿ ಸಂಸ್ಥೆ, ಗ್ರಾಮೀಣ ಸೊಸೈಟಿಗಳು, ಕೃಷಿ, ತೋಟಗಾರಿಕೆ ಮುಂತಾದ ಇಲಾಖೆಗಳನ್ನು ಸಂಯೋಜಿಸಿ ರೈತ ಸಂಪರ್ಕ ಸಭೆ ಮಾಡಿ ಆ ಮಾಹಿತಿ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು. ಮಾರುಕಟ್ಟೆಯಲ್ಲಿ ನೋಂದಾಯಿತ ವ್ಯಾಪಾರಸ್ಥರಿಗೆ ಅಗತ್ಯವಾದ ಸೌಲಭ್ಯ, ಮಾಹಿತಿ, ಸಹಕಾರ ನೀಡಿದಾಗ ಹೆಚ್ಚು ವಹಿವಾಟು ಸಮಿತಿಯ ಮಾರುಕಟ್ಟೆಯಲ್ಲಿ ನಡೆಯುತ್ತದೆ. ಆದಾಯವೂ ಹೆಚ್ಚುತ್ತದೆ. ರೈತರಿಂದ, ವ್ಯಾಪಾರಸ್ಥರಿಂದ ಸಮಿತಿ ಹೊರತಾಗಿ ಇರಬಾರದು. ಅವರಲ್ಲಿ ಸಮಿತಿಯ ಕುರಿತಾದ ವಿಶ್ವಾಸ, ಧೈರ್ಯ ಮೂಡಿಸಬೇಕು ಎಂದರು.

ಅಧಿಕಾರಿಗಳು ಸ್ಪಂದಿಸಲಿ:ರೈತರಿಗೆ ಅವಘಡಗಳಾದಾಗ ಅವರಿಗೆ ತಕ್ಷಣ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು,ಸಿಬ್ಬಂದಿಗಳು ತಕ್ಷಣ ಸ್ಪಂದಿಸಿ,ಅವರಿಗೆ ನೆರವಾಗಬೇಕು. ನೀವೇನು ನಿಮ್ಮ ಜೇಬಿನಿಂದ ಹಣ ಕೊಡೊದಿಲ್ಲ. ಸರ್ಕಾರ ಆ ಕುರಿತಾಗಿ ನೀಡುವ ಆರ್ಥಿಕ ನೆರವನ್ನು ನೀಡಿ. ಅವರಿಗೆ ಸಮಿತಿಯಿಂದ ತಮಗೆ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿ ಎಂದು ಶಾಸಕ ಭೀಮಣ್ಣ ನಾಯ್ಕ ಕಟುವಾಗಿ ಹೇಳಿದರು.ರೈತ ಸಂಪರ್ಕ ಸಭೆಯ ಮೂಲಕ ರೈತರಿಗೆ ಮಾಹಿತಿ ನೀಡುವ ಸಭೆ ಡಿಸೆಂಬರ್,ಜನವರಿಯಲ್ಲಿ ಆಗಬೇಕು. ಒಂದು ತಿಂಗಳ ಮೊದಲು ಆ ಬಗ್ಗೆ ಕೃಷಿ ಸಂಬಂಧಿತ ಇಲಾಖೆ,ಸಹಕಾರಿ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಪೂರ್ವಭಾವಿ ಸಭೆ ನಡೆಸೋಣ. ರೈತ ಸಂಪರ್ಕ ಸಭೆಯ ಬಗ್ಗೆ ಕೃಷಿ ಮಾರುಕಟ್ಟೆ ಇಲಾಖೆ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಇಡುತ್ತೇನೆ. ರೈತರಿಗೆ ಸಮರ್ಪಕ ಮಾಹಿತಿ ನೀಡೋಣ ಎಂದರು.

ತಹಸೀಲ್ದಾರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಾಧಿಕಾರಿ ಎಂ.ಆರ್.ಕುಲಕರ್ಣಿ ಸಮಿತಿಯಿಂದ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು. ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಮಂಗೇಶ ಜಿ.ನಾಯ್ಕ, ಟಿ.ಎಂ.ಎಸ್ಅ ಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ಕಾರ್ಯದರ್ಶಿ ಆಶಾ ಹುಲಸ್ವಾರ ಉಪಸ್ಥಿತರಿದ್ದರು.

ಸಮಿತಿಯ ಲೆಕ್ಕ ಪರಿಶೋಧಕರಾದ ಉಷಾ ನಾಯ್ಕ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ನಾಗರಾಜ ನಾಯ್ಕ ವಂದಿಸಿದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು