ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ವಿ.ಸಿ.ಫಾರಂನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯವು ಮೊಟ್ಟ ಮೊದಲ ಕೃಷಿ ಮೇಳವನ್ನು ವಿ.ಸಿ.ಫಾರಂ ಆವರಣದಲ್ಲಿ ಡಿ.೫ ರಿಂದ ೭ರ ವರೆಗೆ ಆಯೋಜಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಡಿ.೫ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ಮೇಳವನ್ನು ಉದ್ಘಾಟಿಸುವರು. ಮೇಳದಲ್ಲಿ ೩೫೦ ರಿಂದ ೪೦೦ ವಿವಿಧ ಬೆಳೆಗಳ ತಳಿಗಳನ್ನು ಪರಿಚಯಿಸಲಾಗುವುದು. ವಸ್ತು ಪ್ರದರ್ಶನದಲ್ಲಿ ಒಟ್ಟು ೩೫೦ ಮಳಿಗೆಗಳನ್ನು ತೆರೆದು ರೈತರಿಗೆ ಎಲ್ಲ ರೀತಿಯ ಮಾಹಿತಿ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೃಷಿ ಮೇಳದಲ್ಲಿ ಒಂದೇ ಸೂರಿನಡಿ ನವೀನ ಕೃಷಿ ತಂತ್ರಜ್ಞಾನಗಳ ಪ್ರದರ್ಶನ, ವಸ್ತು ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪದ್ಧತಿ ಪ್ರಾತ್ಯಕ್ಷಿಕೆಗಳು, ಪಶು ಸಂಗೋಪನೆ ತಾಂತ್ರಿಕತೆಗಳು, ಮೀನು ಕೃಷಿ, ಸಸ್ಯ ಕ್ಷೇತ್ರ ನಿರ್ವಹಣೆಯಲ್ಲಿ ಪ್ರಮುಖವಾಗಿ ದೇಸಿ ಮತ್ತು ವಿದೇಶಿ ತಳಿಗಳ ಬಗ್ಗೆ ಮಾಹಿತಿ, ಮಾರಾಟವನ್ನು ಕೈಗೊಳ್ಳಲಾಗಿದೆ. ರೇಷ್ಮೆ ಕೃಷಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಪ್ರಾತ್ಯಕ್ಷಿಕೆ, ಬಹುಬೆಳೆ ಪದ್ಧತಿ, ಸಮುದಾಯ ಕೃಷಿ, ಗುತ್ತಿಗೆ ಆಧಾರದ ಕೃಷಿ, ಜೈವಿಕ ಕೃಷಿ, ನೀರಾವರಿ ಪದ್ಧತಿಗಳು, ಕಾಫಿ ಮತ್ತು ಸಾಂಬಾರ ಬೆಳೆಗಳ ತಂತ್ರಜ್ಞಾನಗಳು, ಕಬ್ಬು ಬೆಳೆಯಲ್ಲಿ ತರಗು ಮುಚ್ಚಿಗೆಯ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.ಹೈಟೆಕ್ ತೋಟಗಾರಿಕೆ ಪ್ರಾತ್ಯಕ್ಷಿಕೆ, ಸುಧಾರಿತ ಮೇವಿನ ತಳಿಗಳು ಮತ್ತು ತಾಂತ್ರಿಕತೆಗಳು, ಸಿರಿಧಾನ್ಯಗಳ ಮೇಳ, ಜೈವಿಕ ಇಂಧನದ ತಂತ್ರಜ್ಞಾನಗಳು, ಮಾರುಕಟ್ಟೆಯ ತಂತ್ರಗಳು, ಕೃಷಿ ಅರಣ್ಯ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಗಳು, ಕೃಷಿ ಹವಾಮಾನ ನಿರ್ವಹಣೆ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ವಿಸ್ಮಯಕಾರಿ ಕೀಟ ಪ್ರಪಂಚದ ಪ್ರದರ್ಶನ, ಜೇನು ಕೃಷಿ, ಹೈಟೆಕ್ ನರ್ಸರಿ ಪ್ರದರ್ಶನ ಮತ್ತು ಮಾರಾಟ, ರೈತರು ಬೆಳೆದ ಉತ್ಪನ್ನ ಮತ್ತು ಕೈಗೊಂಡ ಮೌಲ್ಯವರ್ಧನೆಯನ್ನು ನೇರ ಗ್ರಾಹಕರಿಗೆ ಮಾರಾಟದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಕೃಷಿ ಯಾಂತ್ರೀಕರಣ ಪ್ರದರ್ಶನ ಮತ್ತು ಮಾರಾಟ, ವಿ.ಸಿ.ಫಾರಂ, ಮಂಡ್ಯದಲ್ಲಿ ಡ್ರೋನ್ ಬಳಕೆಯ ಬಗ್ಗೆ ಸಂಶೋಧನೆ ಕೈಗೊಂಡು, ಸಂಶೋಧನೆಯ ಆಧಾರದ ಮೇಲೆ ಕೃಷಿ ಮೇಳದಲ್ಲಿ ಪ್ರಾತ್ಯಕ್ಷಿಕೆ ಮತ್ತು ಮಾಹಿತಿಯನ್ನು ನೀಡಲಾಗುವುದು ಎಂದು ವಿವರಿಸಿದರು.ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಪ್ರವಾಸೋಧ್ಯಮದ ಬಗ್ಗೆ ಮಾಹಿತಿ ನೀಡಲಾಗುವುದು. ಪ್ರಚಲಿತ ವಿಷಯಗಳ ಆಧಾರದ ಮೇಲೆ ರೈತ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿಗಳು, ತಜ್ಞರಿಂದ ಸಲಹಾ ಸೇವೆಗಳನ್ನು ನೀಡಲಾಗುವುದು, ಐದು ಜಿಲ್ಲೆಗಳಿಂದ ಒಟ್ಟು ೧೦ ಜನ ಜಿಲ್ಲಾ ಮಟ್ಟದ ಪ್ರಗತಿಪರ ರೈತ / ರೈತ ಮಹಿಳೆ ಪ್ರಶಸ್ತಿ ಮತ್ತು ೫೫ ಜನ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಹರಿಣಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್ ಹಾಜರಿದ್ದರು.ಮೇಳದಲ್ಲಿ ೬ ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಮೇಳದಲ್ಲಿ ೫ ರಿಂದ ೬ ಲಕ್ಷ ರೈತರು. ಸಾರ್ವಜನಿಕರು, ವಿಜ್ಞಾನಿಗಳು, ಉದ್ದಿಮೆದಾರರು, ಚಿಂತಕರು, ವಿದ್ಯಾರ್ಥಿಗಳು, ಕೃಷಿ ಪರಿಕರ ಮಾರಾಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಕೃಷಿ ಮೇಳಕ್ಕೆ ಆಗಮಿಸುವ ರೈತರು ಮತ್ತು ಸಾರ್ವಜನಿಕರಿಗೆ ಮಂಡ್ಯ ನಗರದಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಸಾಂಪ್ರದಾಯಕ ಪದ್ಧತಿಯ ಆಹಾರವನ್ನು ಮೇಳದಲ್ಲಿ ನೀಡಲಾಗುವುದು, ಮೇಳಕ್ಕೆ ಆಗಮಿಸುವ ರೈತರಿಗೆ ಮತ್ತು ಸಾರ್ವಜನಿಕರಿಗೆ ವೈಜ್ಞಾನಿಕ ಮಾಹಿತಿ ನೀಡಲು ಸ್ವಯಂ ಸೇವಕರ ನಿಯೋಜನೆ ಮಾಡಲಾಗಿದೆ ಎಂದರು.೩೦ರಂದು ಜಾಗೃತಿ ಜಾಥಾ
ಕೃಷಿ ಮೇಳದ ಬಗ್ಗೆ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನ.೩೦ರಂದು ಮಂಡ್ಯ ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ರೈತರು, ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು, ಸಾರ್ವಜನಿಕರು, ಉದ್ದಿಮೆದಾರರು ಹಾಗೂ ಇನ್ನಿತರರು ವಿ.ಸಿ. ಫಾರಂನಲ್ಲಿ ನಡೆಯುವ ಕೃಷಿ ಮೇಳದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಚಿವರು ಮನವಿ ಮಾಡಿದರು.ಫಿಲಿಫೈನ್ಸ್ ಜತೆ ಒಪ್ಪಂದಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ವಿ.ಸಿ. ಫಾರಂನಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ರೈಸ್ ರಿಸರ್ಚ್ ಇನ್ ಕರ್ನಾಟಕ’ ಸ್ಥಾಪಿಸಲು ಉದ್ದೇಶಿಸಿದ್ದು, ಉತ್ತಮ ಪೋಷಕಾಂಶ ಭರಿತ, ಕಡಿಮೆ ನೀರಿನಲ್ಲಿ ಬೆಳೆಯಬಹುದಾದಂತಹ, ರೋಗ ಮತ್ತು ಕೀಟ ಬಾಧೆಗೆ ನಿರೋಧಕತೆಯುಳ್ಳ ಹಾಗೂ ಅಧಿಕ ಇಳವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಭತ್ತದ ಸಂಶೋಧನಾ ಕೇಂದ್ರ, ಫಿಲಿಫೈನ್ಸ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಹಾಗೂ ಫಿಲಿಫೈನ್ಸ್ ದೇಶದಲ್ಲಿ ಅಭಿವೃದ್ಧಿಪಡಿಸಿದ ಉತ್ತಮ ತಳಿಗಳನ್ನು ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ತಂದು ಪ್ರಾತ್ಯಕ್ಷಿಕೆ ಕೈಗೊಂಡು, ಉತ್ತಮ ತಳಿಗಳನ್ನು ರೈತರಿಗೆ ತಲುಪಿಸಲು ಉದ್ದೇಶಿಸಲಾಗಿದೆ.
- ಎನ್.ಚಲುವರಾಯಸ್ವಾಮಿ, ಕೃಷಿ ಸಚಿವರು