ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ದೊಡ್ಡಕೇರಿಯ ಬೀರಲಿಂಗೇಶ್ವರ ದೇವರ 63ನೇ ವರ್ಷದ ಕಾರ್ತಿಕೋತ್ಸವದ ಅಂಗವಾಗಿ, ಶ್ರೀ ಬೀರಪ್ಪ ದೇವರು ಹಾಗೂ ಶ್ರೀ ವೀರಭದ್ರೇಶ್ವರ ದೇವರ ಗುಗ್ಗಳ ಮಹೋತ್ಸವ ನ.25 ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.ಮಂಗಳವಾರ ನಸುಕಿನಲ್ಲಿಯೇ ಹೊಳೆಪೂಜೆಗೆ ಹೊರಟ ದೇವರ ಉತ್ಸವ ಮೂರ್ತಿಗಳು, ದೇವರ ಸೇವೆಗೆ ಮೀಸಲಿದ್ದ ಸೇವಕರು ತುಂಗಭದ್ರಾ ನದಿಗೆ ತೆರಳಿದರು. ಅಲ್ಲಿ ಅಭಿಷೇಕ, ವಿಶೇಷ ಪೂಜಾ ವಿಧಿವಿದಾನಗಳು ನಡೆದ ಬಳಿಕ ದೇವರ ಗಣಮಕ್ಕಳಾದ ಶ್ರೀ ಪ್ರಭುಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ ತುಂಗಭದ್ರಾ ನದಿಯಲ್ಲಿ ಇಳಿದು ಸ್ನಾನ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಬೀರಪ್ಪ ದೇವರಿಗೆ ಪ್ರಿಯವಾದ ಡೊಳ್ಳುಗಳನ್ನು ಬಾರಿಸಲಾಯಿತು. ಡೊಳ್ಳುಗಳ ಶಬ್ಧ ಕಿವಿಗಡಚಿಕ್ಕುತ್ತಿದ್ದಂತೆ ಗಣಮಕ್ಕಳ ಮೇಲೆ ದೇವರ ಆವಾಹನೆಯಾದಂತಾಗಿ ದೇವರ ಗಣಮಕ್ಕಳು ನರ್ತಿಸಲಾರಂಭಿಸಿದರು.
ಗಣಮಗ ಪ್ರಭುಸ್ವಾಮಿ ಮುಳ್ಳು ಪಲ್ಲಕ್ಕಿಯ ಮೇಲೆ, ಅಣ್ಣಪ್ಪ ಸ್ವಾಮಿ ಅವರು ಕಬ್ಬಿಣದ ಮೊಳೆಗಳ ಪಲ್ಲಕ್ಕಿಯ ಮೇಲೆ ಆಸೀನರಾದರು. ಬೀರಪ್ಪ ದೇವರಿಗೆ ಜಯವಾಗಲಿ ಎಂಬ ಜಯಘೋಷ ಮುಗಿಲು ಮುಟ್ಟಿತು. ನಂತರ ಪಟ್ಟಣದಲ್ಲಿನ ಸಾಲು ಸಾಲು ದೇವರ ಮೆರವಣಿಗೆ ಹೊರಟಿತು. ಮುತ್ತೈದೆಯರು ದೇವರ ಬೆತ್ತವನ್ನು ಹೊತ್ತವರು, ಜೋಗಪ್ಪ, ಜೊಗುತಿಯರು ಸಾಲು ಸಾಲಾಗಿ ಮೆರವಣಿಗೆ ಹೊರಟರು. ಈ ಮಧ್ಯೆ ಶಿವ ತಾಂಡವ ನೃತ್ಯ ಕಲಾವಿದರು, ವೀರಗಾಸೆ, ಡೊಳ್ಳುಗಳ ಕಲಾವಿದರು ಅಲ್ಲಲ್ಲಿ ಗುಂಪು ಗುಂಪಾಗಿ ದೇವರ ಐತಿಹ್ಯ ಕುರಿತು ಕಥೆಗಳನ್ನು ಹೇಳುತ್ತ ಹೊರಟರು. ದೇವರುಗಳು ಪೇಟೆ ಬೀದಿಯ ಮೂಲಕ ದುರ್ಗಮ್ಮ ದೇವಸ್ಥಾನ ಮುಂಭಾಗದಲ್ಲಿ ವ್ಯವಸ್ಥೆ ಮಾಡಿದ್ದ ಕೆಂಡದ ಹೊಂಡಕ್ಕೆ ಬಂದವು. ಹೊಸದುರ್ಗ ಶಾಖಾಮಠದ ಈಶ್ವರಾನಂದ ಪುರಿ ಸ್ವಾಮೀಜಿ, ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕೆಂಡ ಹಾಯುವ ಹೊಂಡವನ್ನು ಪೂಜಿಸಿದರು. ನಂತರ ದೇವರ ಗಣಮಗ ಪ್ರಭುಸ್ವಾಮಿ ಅವರು ನಿಗಿ ನಿಗಿ ಕೆಂಡವನ್ನು ತುಳಿಯುವ ಮೂಲಕ ಚಾಲನೆ ನೀಡಿದರು. ಬಳಿಕ ಅಣ್ಣಪ್ಪ ಸ್ವಾಮಿ ಕೆಂಡದ ಮೇಲೆ ಹಾದು ಹೋದರು. ನಂತರ ಗಾಳಿದುರ್ಗಮ್ಮ ದೇವಿ, ಸುಡಗಾಡು ಸಿದ್ದಪ್ಪ ದೇವರು, ಗೋಪೆನಹಳ್ಳಿ ಸಿದ್ದಪ್ಪ, ವೀರಭದ್ರ ದೇವರು ಸೇರಿದಂತೆ ಹಲವಾರು ದೇವರ ಪಲ್ಲಕ್ಕಿ ಹೊತ್ತ ಭಕ್ತರು ಕೆಂಡ ಹಾದರು.ಬಳಿಕ ಭಕ್ತರಿಗೆ ಕೆಂಡ ಹಾಯಲು ಕಮಿಟಿಯವರು ಅವಕಾಶ ಮಾಡಿಕೊಟ್ಟರು. ನಂತರ ದೇವರ ಪಲ್ಲಕ್ಕಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಕೂಡ ಕೆಂಡ ತುಳಿದರು. ಉತ್ಸವ ಕಮಿಟಿಯ ಪದಾಧಿಕಾರಿಗಳಾದ ಯಜಮಾನ್ ಎಚ್.ಬಿ.ಗಿಡ್ಡಪ್ಪ, ತೆಂಗಿನಮರದ ಮಾದಪ್ಪ, ಬುದ್ಧಿವಂತರ ನರಸಿಂಹಪ್ಪ, ಗೌಡ್ರು ಗಾಳೇಶಪ್ಪ, ಎಚ್.ಡಿ.ವಿಜೇಂದ್ರಪ್ಪ, ಎಚ್.ಬಿ.ಅಣ್ಣಪ್ಪ, ಸತ್ತಿಗೆ ಮಂಜಪ್ಪ, ಮಾಜಿ ಸೈನಿಕ ಎಂ.ವಾಸಪ್ಪ, ಸೊರಟೂರು ಗಣೇಶ್, ಕಾಟ್ಯಾ ಕುಮಾರ್, ಸತ್ತಿಗೆ ಲೋಕೇಶ್, ಬಿ.ಕೆ.ಮಾದಪ್ಪ, ಎನ್.ಕೆ. ಆಂಜನೇಯ, ಬಿಸಾಟಿ ನಾಗರಾಜಪ್ಪ, ಇಟ್ಟಿಗೆ ಬಸವರಾಜಪ್ಪ, ಕವಳಿ ಮಾದಪ್ಪ, ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.ಇಂದಿನಿಂದ ಮೂರು ದಿನಗಳ ಕಾಲ ಕುಸ್ತಿ ಪಂದ್ಯ
ಕಾರ್ತಿಕೋತ್ಸವದ ಅಂಗವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪಕ್ಕದ ಮೈದಾನದಲ್ಲಿ ನ.26 ಬುಧವಾರದಿಂದ ನ.28 ವರೆಗೆ ಮೂರು ದಿನಗಳ ಕಾಲ ಬಯಲು ಖಾಟಾ ಜಂಗಿ ಕುಸ್ತಿ ಏರ್ಪಡಿಸಲಾಗಿದ್ದು, ವಿಶೇಷವಾಗಿ ಈ ಬಾರಿ ರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಹೊರ ರಾಜ್ಯಗಳಿಂದ ಬಂದಂತಹ ಕುಸ್ತಿಪಟುಗಳಿಗೆ ಮೂರು ದಿನಗಳ ಕಾಲ ಊಟ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕುಸ್ತಿ ಕಮಿಟಿ ಅಧ್ಯಕ್ಷರಾದ ಎಚ್.ಬಿ. ಅಣ್ಣಪ್ಪ ತಿಳಿಸಿದರು. ಕುಸ್ತಿ ಕಮಿಟಿಯ ಗೌರವಾಧ್ಯಕ್ಷರಾದ ಎನ್.ಕೆ. ಆಂಜನೇಯ, ಪದಾಧಿಕಾರಿಗಳಾದ ಕಾಳಿಂಗಪ್ಪ, ಮುಖಂಡರಾದ ಬಿಸಾಟಿ ನಾಗರಾಜಪ್ಪ, ಇಟ್ಟಿಗೆ ಬಸವರಾಜಪ್ಪ, ಕವಳಿ ಮಾದಪ್ಪ ಹಾಜರಿದ್ದರು.