ಕನ್ನಡಪ್ರಭ ವಾರ್ತೆ ಕೊರಟಗೆರೆ
ದೇವರಲ್ಲಿ ನಂಬಿಕೆ ಮತ್ತು ಗೌರವ ಇಟ್ಟುಕೊಂಡಂತಹ ವ್ಯಕ್ತಿಗಳಲ್ಲಿ ದೈವಗುಣ ಹೆಚ್ಚಾಗಿ ಬೆಳೆಯಲಿದೆ ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ಕೋಳಾಲ ಹೋಬಳಿ ಮಾವತ್ತೂರು ಗ್ರಾಮದಲ್ಲಿ ನಡೆದ ಶ್ರೀವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ೧೨ನೇ ವರ್ಷದ ಶ್ರೀವಿಘ್ನೇಶ್ವರ ಸ್ವಾಮಿಗೆ ಆರತಿ ಮತ್ತು ಲಕ್ಷದೀಪೋತ್ಸವ, ಗಂಗಾರತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ದೈವಿಗುಣವನ್ನು ಜೀವನದಲ್ಲಿ ಹೆಚ್ಚಾಗಿ ಅಳವಡಿಸಿಕೊಂಡಾಗ ಆ ವ್ಯಕ್ತಿ ಸರ್ವರಲ್ಲೂ ದೇವರನ್ನು ಕಾಣುವುದರ ಜೊತೆಗೆ ಪ್ರೀತಿ, ವಿಶ್ವಾಸ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ರಾಕ್ಷಸಿ ಗುಣದ ವ್ಯಕ್ತಿಗಳು ಇನ್ನೊಬ್ಬರಿಗೆ ನೋವನ್ನು ಕೊಟ್ಟು ಸಂತೋಷ ಪಡುವಂತವಾಗಿರುತ್ತಾರೆ. ಪೂರ್ವಿಕರು ಅದಕ್ಕಾಗಿಯೇ ಗ್ರಾಮದಲ್ಲಿ ದೇವಾಲಯ ಕಟ್ಟಿ ಅರಸೇಶ್ವರಿ ತಾಯಿ, ವಿಘ್ನೇಶ್ವರನ್ನು ಪ್ರತಿಷ್ಠಾಪಿಸಿ ಪೂಜಿಸುವಂತಹ ಕೆಲಸ ಕಾರ್ಯರೂಪಕ್ಕೆ ಬಂದಿತ್ತು. ಎಂದು ಹೇಳಿದರು.ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾತನಾಡಿ, ಕಾಶಿಯಲ್ಲಿ ನೋಡಲಾಗುತ್ತಿದ್ದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಮಾವತ್ತೂರು ಗ್ರಾಮದಲ್ಲಿ ನೋಡುತ್ತಿರುವುದು ನಮ್ಮ ಪುಣ್ಯ, ಪಕ್ಷಾತೀತವಾಗಿ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದೆ ಎಂದರು.ಮಾಜಿ ಜಿ.ಪಂ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ಮಾತನಾಡಿ, ಅರಸೇಶ್ವರಿ ದೇವಾಲಯಕ್ಕೆ ಸಮುದಾಯ ಭವನ ಬೇಕೆಂದು ಸ್ಥಳೀಯ ಗ್ರಾಮಸ್ಥರು ಕೇಳಿಕೊಂಡಿದ್ದರು, ಕುಟುಂಬದಿಂದ ತಾಯಿಗೆ ಪೂಜೆಗೆ ಕೂಡ ಸಲ್ಲಿಸಿದ್ದೇವು, ೩ ತಿಂಗಳಲ್ಲಿ ಸಮುದಾಯ ಭವನ ನಿರ್ಮಾಣದ ಕೆಲಸ ಪೂರ್ಣಗೊಳ್ಳಲಿದ್ದು, ತಾಯಿಗೆ ವಿಶೇಷ ಪೂಜೆ ಮತ್ತು ಬೃಹತ್ ವೇದಿಕೆ ಕಾರ್ಯಕ್ರಮ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.ಈ ಕಾರ್ಯಕ್ರಮದಲ್ಲಿ ಉದ್ಯಮಿ ನಿಲೇಶ್, ಸರಿಗಮಪ ಕಂಬದ ರಂಗಯ್ಯ, ಬಿಜೆಪಿ ಮಂಡಲದ ತಾ.ಅಧ್ಯಕ್ಷ ರುದ್ರೇಶ್, ಮಾವತ್ತೂರು ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಮಹಾಲಿಂಗಯ್ಯ, ಜೆಡಿಎಸ್ ಕಾರ್ಯಾಧ್ಯಕ್ಷ ತುಂಬಾಡಿ ಲಕ್ಷ್ಮೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಜೆಡಿಎಸ್ ವಕ್ತಾರ ಮಾವತ್ತೂರು ಮಂಜುನಾಥ್, ಹೋಬಳಿ ಅಧ್ಯಕ್ಷ ದೇವರಾಜ್, ಎಲೆರಾಂಪುರ ಗ್ರಾ.ಪಂ ಅಧ್ಯಕ್ಷ ನರಸಿಂಹಮೂರ್ತಿ, ನೀಲಗೊಂಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಬಿಜೆಪಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಓಂಕಾರ್, ವಿಎಸ್‌ಎಸ್ ಅಧ್ಯಕ್ಷ ಮಧುಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಜಿ.ಎಂ ಶಿವಾನಂದ್, ಚಿನ್ನಹಳ್ಳಿ ಗ್ರಾ.ಪಂ ಸದಸ್ಯ ಗಂಗಪ್ಪ ಸೇರಿದಂತೆ ಇತರರು ಇದ್ದರು.