ಕುರ್ಚಿ ಕಿತ್ತಾಟ: ಪರಿಹರಿಸಿಕೊಂಡೇ ಬೆಳಗಾವಿಗೆ ಬನ್ನಿ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Nov 26, 2025, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.8ರಿಂದ ನಡೆಯುವ ಅಧಿವೇಶನಕ್ಕೆ ಮುನ್ನ ಮುಖ್ಯಮಂತ್ರಿ ಕುರ್ಚಿಗೆ ಪರಿಹಾರ ಕಂಡುಕೊಂಡು ಬನ್ನಿ. ಸಿಎಂ ಕುರ್ಚಿ ಪೈಪೋಟಿ ಇತ್ಯರ್ಥ ಆಗಿಲ್ಲವೆಂದರೆ ಅಧಿವೇಶನವನ್ನೇ ಮುಂದೂಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.8ರಿಂದ ನಡೆಯುವ ಅಧಿವೇಶನಕ್ಕೆ ಮುನ್ನ ಮುಖ್ಯಮಂತ್ರಿ ಕುರ್ಚಿಗೆ ಪರಿಹಾರ ಕಂಡುಕೊಂಡು ಬನ್ನಿ. ಸಿಎಂ ಕುರ್ಚಿ ಪೈಪೋಟಿ ಇತ್ಯರ್ಥ ಆಗಿಲ್ಲವೆಂದರೆ ಅಧಿವೇಶನವನ್ನೇ ಮುಂದೂಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ತಾಲೂಕಿನ ಶಿರಮನಗೊಂಡಹಳ್ಳಿ ಗ್ರಾಮದಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಔಟ್‌ ಗೋಯಿಂಗ್‌ ಮುಖ್ಯಮಂತ್ರಿಯೆಂದು ಸ್ವತಃ ಆಡಳಿತ ಪಕ್ಷದವರೇ ಹೇಳುತ್ತಿದ್ದಾರೆ. ಕುರ್ಚಿ ಕಿತ್ತಾಟಕ್ಕೆ ಪರಿಹಾರ ಕಂಡುಕೊಳ್ಳದೇ, ಬೆಳಗಾವಿ ಅಧಿವೇಶನಕ್ಕೆ ಬಂದರೆ ರೈತರು, ಜನರ ಸಮಸ್ಯೆಗಳಿಗೆ ಪರಿಹಾರವಂತೂ ಸಿಗುವುದಿಲ್ಲ. ಹೀಗಿರುವಾಗ ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡುತ್ತೀರಿ? ರೈತರ ಸಮಸ್ಯೆಗೆ ಪರಿಹಾರ ನೀಡುವುದಿದ್ದರೆ ಅಧಿವೇಶನ ಮಾಡಬೇಕು ಎಂದು ಎಚ್ಚರಿಸಿದರು.

ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ:

ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ಬೆಳೆದ ರೈತರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ತುಮಕೂರಿನಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತಿದ್ದರೂ ಮೆಕ್ಕೆಜೋಳ ಬೆಳೆಗಾರರ ಹಿತಕಾಯುವ ಕೆಲಸ ಸರ್ಕಾರ ಮಾಡುತ್ತಿಲ್ಲ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಗ‍ಳವಾರ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಮೆಕ್ಕೆಜೋಳ ಬೆಳೆದ ರೈತರು ಹೋರಾಟಕ್ಕೆ ಇಳಿದಿದ್ದಾರೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸದೆ, ಅನ್ಯಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಪರ ಹೋರಾಟಕ್ಕೆ ಬಿಜೆಪಿ ತೀರ್ಮಾನ ಕೈಗೊಂಡಿದೆ. ರಾಜ್ಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ನ.27 ಮತ್ತು 28ರಂದು ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಡಿ.1 ಮತ್ತು 2ರಂದು ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳು, ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬಗ್ಗೆ ಗಮನ ಕೊಡಿ ಎಂದು ಹೇಳಿದ ಅವರು, ಇಂದು ಮಧ್ಯ ಕರ್ನಾಟಕ ದಾವಣಗೆರೆಯಿಂದ ರೈತಪರ ಹೋರಾಟಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದರು.

ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ವಿಪ ಸದಸ್ಯ ಸಿ.ಟಿ.ರವಿ, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಂ.ಬಸವರಾಜ ನಾಯ್ಕ, ಮಾಡಾಳ್‌ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಬಿ.ಜಿ.ಅಜಯಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪಿ.ಸಿ.ಶ್ರೀನಿವಾಸ ಭಟ್, ಧನಂಜಯ ಕಡ್ಲೇಬಾಳ್ ಇತರರು ಇದ್ದರು.

ರವೀಂದ್ರನಾಥ ನಿವಾಸಕ್ಕೆ ವಿಜಯೇಂದ್ರ ಭೇಟಿ

ದಾವಣಗೆರೆ: ಭಾರತೀಯ ರೈತ ಒಕ್ಕೂಟದ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರ ಕ್ಷೇತ್ರ ಶಾಸಕ ಬಿ.ವೈ.ವಿಜಯೇಂದ್ರ ಮಂಗಳವಾರ ಭೇಟಿ ನೀಡಿ, ನ.26ರಂದು ಜನ್ಮದಿನದ ಹಿನ್ನೆಲೆ ಶುಭಾಶಯಗಳನ್ನು ಕೋರಿದರು.

ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಅವರ ನಿವಾಸಕ್ಕೆ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿ ಜನ್ಮದಿನ ಶುಭಾಶಯ ತಿಳಿಸಿದರು.

ಎಸ್.ಎ. ರವೀಂದ್ರನಾಥ ಅವರು ಜನಸಂಘ ಕಾಲದಿಂದಲೂ ಸಕ್ರಿಯವಾಗಿರುವ, ಬಿಜೆಪಿಯ ಹಿರಿಯ ನಾಯಕ, ಭಾರತೀಯ ರೈತರ ಒಕ್ಕೂಟದ ಧುರೀಣರೂ ಆಗಿದ್ದಾರೆ. ಬಿ.ವೈ.ವಿಜಯೇಂದ್ರ ಸುಮಾರು ಹೊತ್ತು ಹಿರಿಯ ನಾಯಕನ ಜೊತೆಗೆ ಚರ್ಚಿಸಿದರು. ಅನಂತರ ಅಲ್ಲಿಂದ ದಾವಣಗೆರೆಗೆ ತೆರಳಿ, ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ ರಾಜ್ಯವ್ಯಾಪಿ ಬಿಜೆಪಿ ಹೋರಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!