ರೈತರ ಉತ್ತಮ ಜೀವನಕ್ಕೆ ಕೃಷಿ ಭಾಗ್ಯ ಸಹಕಾರಿ

KannadaprabhaNewsNetwork |  
Published : Jun 22, 2025, 11:47 PM IST
21 ಬೀರೂರು 3ಬೀರೂರು ಹೋಬಳಿಯ ದೊಡ್ಡಘಟ್ಟ ಗ್ರಾಮದಲ್ಲಿ ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿರುವುದು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ರೈತರೊಂದಿಗೆ | Kannada Prabha

ಸಾರಾಂಶ

ಮಳೆಯೇ ಕೃಷಿಗೆ ಆಧಾರ. ಹೀಗಾಗಿ ಕಡೂರು ತಾಲೂಕು ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಉತ್ತೇಜಿಸಿ ಬೆಳೆ ಉತ್ಪಾದಕತೆ ಮತ್ತು ರೈತರ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಇದು ಕೃಷಿಕರಿಗೆ ವರದಾನವಾಗಿದೆ. 2024-25ನೇ ಸಾಲಿಗೆ ತಾಲೂಕಿನಲ್ಲಿ 70 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.

ಬೀರೂರು ಎನ್.ಗಿರೀಶ್ಕನ್ನಡಪ್ರಭ ವಾರ್ತೆ ಬೀರೂರು

ಮಳೆಯೇ ಕೃಷಿಗೆ ಆಧಾರ. ಹೀಗಾಗಿ ಕಡೂರು ತಾಲೂಕು ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಉತ್ತೇಜಿಸಿ ಬೆಳೆ ಉತ್ಪಾದಕತೆ ಮತ್ತು ರೈತರ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಇದು ಕೃಷಿಕರಿಗೆ ವರದಾನವಾಗಿದೆ. 2024-25ನೇ ಸಾಲಿಗೆ ತಾಲೂಕಿನಲ್ಲಿ 70 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.

ಈ ಬಾರಿಯು ಯೋಜನೆಯನ್ನು ಮುಂದುವರಿಸುವ ಮೂಲಕ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ರೈತರ ಜಮೀನಿನಲ್ಲಿ ಬಿದ್ದ ಹೆಚ್ಚುವರಿ ಮಳೆ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ, ಮಳೆ ಇಲ್ಲದ ಸಮಯದಲ್ಲಿ ಬೆಳೆಗಳ ಸಂದಿಗ್ಧ ಹಂತಗಳಲ್ಲಿ ತುಂತುರು, ಹನಿ ನೀರಾವರಿ ಘಟಕಗಳ ಸಹಾಯದಿಂದ ರಕ್ಷಣಾತ್ಮಕ ನೀರಾವರಿಯಾಗಿ ಬಳಸಬಹುದಾಗಿದೆ. ಸಮರ್ಪಕವಾಗಿ ಮಳೆ ನೀರಿನ ಸಂಗ್ರಹಣೆ ಮಾಡುವುದು. ಶೇಖರಣೆಯಾದ ನೀರನ್ನು ಉಪಯುಕ್ತವಾಗಿ ಬಳಕೆ ಮಾಡಿ ಕೃಷಿ ಉತ್ಪಾದಕತೆ ಉತ್ತಮ ಪಡಿಸಿ ಆದಾಯ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ.

ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತ ತಂತಿಬೇಲಿ, ಹೊಂಡದಿಂದ ನೀರೆತ್ತಲು ಡೀಸೆಲ್, ಪೆಟ್ರೋಲ್, ಸೋಲಾರ್ ಪಂಪ್ಸೆಟ್, ನೀರನ್ನು ಬೆಳೆಗಳಿಗೆ ಹಾಯಿಸಲು ತುಂತುರು ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ. ಕೃಷಿ ಭಾಗ್ಯ ಯೋಜನೆಯ ಸವಲತ್ತು ಪಡೆಯಲು ಆಸಕ್ತ ರೈತರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ರೈತರು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಜೊತೆ ಏನಿರಬೇಕು?:

ಅರ್ಜಿಯ ಜೊತೆ ಎಫ್ಐಡಿ, ರೈತರ ಭಾವಚಿತ್ರ ಇರಬೇಕು. ಕ್ರೂಟ್ಸ್ ಐಡಿ ಇರದಿದ್ದರೆ, ಆಧಾರ್ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ಬುಕ್ ಪ್ರತಿ, ರೈತರ ಭಾವಚಿತ್ರ ಸಲ್ಲಿಸುವುದು ಕಡ್ಡಾಯ. ಜೇಷ್ಠತಾ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ರೈತರು ಒಂದೇ ಇಲಾಖೆಯಿಂದ ಹಾಗೂ ಒಂದೇ ಯೋಜನೆಯಿಂದ ಸಹಾಯಧನ ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಕೃಷಿ ಹೊಂಡ ಕಾಮಗಾರಿ ಅನುಷ್ಠಾನಗೊಳಿಸುತ್ತಿರುವ ಇತರೆ ಇಲಾಖೆ ಮುಖ್ಯಸ್ಥರಿಂದ ನಿರಾಕ್ಷೇಪಣಾ ಪತ್ರ ಸಲ್ಲಿಸುವುದು ಕಡ್ಡಾಯ.

ಏನಿದು ಕೃಷಿ ಭಾಗ್ಯ?:

ಮಳೆ ಆಶ್ರಿತ ಪ್ರದೇಶದ ರೈತರು ಬೇಸಾಯಕ್ಕೆ ಮಳೆ ನೀರು ಸಂಗ್ರಹಿಸಲು ಅವಕಾಶವಾಗಲಿದೆ, ಕೃಷಿ ಹೊಂಡ ನಿರ್ಮಿಸಿ, ನೀರು ಇಂಗದಂತೆ ಪಾಲಿಥಿನ್ ಶೀಟ್ ಅಳವಡಿಕೆ, ನೀರು ಎತ್ತಲು ಡೀಸೆಲ್ ಪಂಪ್ಸೆಟ್ ಅಳವಡಿಸಿ, ತುಂತುರು ನೀರಾವರಿ ವ್ಯವಸ್ಥೆ, ಕೃಷಿ ಹೊಂಡದ ಸುತ್ತ ತಂತಿ ಬೇಲಿ ಅಳವಡಿಕೆಗೆ ಸರ್ಕಾರ ನೆರವು ನೀಡಲಿದೆ.

ರೈತರಿಗೇನು ಲಾಭ?:

ಮಳೆಯಾಶ್ರಿತ ಕೃಷಿ ಬದಲು ಸುಸ್ಥಿರ ಕೃಷಿ ಮಾಡಲು ಸಾಧ್ಯ, ಕೃಷಿ ಹೊಂಡ ನಿರ್ಮಾಣದಿಂದ ನಿರಂತರ ಕೃಷಿಗೆ ಅವಕಾಶ, ಒಣ ಭೂಮಿಯಲ್ಲಿ ಬೇಸಾಯ ಮಾಡಲು ಅನುಕೂಲ, ಸೀಮಿತ ಕೃಷಿ ಬದಲು ವರ್ಷಪೂರ್ತಿ ಬೇಸಾಯ ಮಾಡಲು ಸಾಧ್ಯ

ಪ್ಯಾಕೇಜ್ ಮಾದರಿ:

ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಇಲಾಖೆಯು ಈ ಬಾರಿ ಸಾಮಾನ್ಯ ವರ್ಗದ ರೈತರಿಗೆ ಶೇ.80ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದೆ.

ಮಳೆಯಾಶ್ರಿತ ಜೀವನಾಧರಿತ ಕೃಷಿಯಿಂದ ಸುಸ್ಥಿರ ಕೃಷಿಯನ್ನಾಗಿ ಪರಿವರ್ತಿಸಿ ರೈತರ ಜೀವನ ಮಟ್ಟ ಉತ್ತಮಪಡಿಸಲು ಕೃಷಿ ಭಾಗ್ಯ ಯೋಜನೆ ವಿಶೇಷವಾಗಿದೆ. ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ರೈತರಿಗೆ ಕೃಷಿಭಾಗ್ಯ ಯೋಜನೆ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಕೃಷಿ ಭಾಗ್ಯ ಯೋಜನೆಯಡಿ ಒಳಪಡುವ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಹಣ ಪಾವತಿ ಮಾಡಲಾಗುತ್ತದೆ.

ಅಶೋಕ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಕಡೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ