2,252 ಗ್ರಾಮಕ್ಕೆ ಪ್ರವಾಹ, ಭೂಕುಸಿತ ಭೀತಿ!

KannadaprabhaNewsNetwork |  
Published : Jun 22, 2025, 11:47 PM ISTUpdated : Jun 23, 2025, 08:01 AM IST
lakkidi land slide

ಸಾರಾಂಶ

ರಾಜ್ಯದ 171 ತಾಲೂಕುಗಳ 2,252 ಗ್ರಾಮಗಳು ಈಗಲೂ ಪ್ರವಾಹ ಅಥವಾ ಭೂಕುಸಿತದ ಭೀತಿ ಎದುರಿಸುತ್ತಿವೆ.

ಗಿರೀಶ್‌ ಗರಗ

 ಬೆಂಗಳೂರು :  ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರಿಸಿ ಈಗ ತಣ್ಣಗಾಗಿದೆ. ಆದರೂ, ರಾಜ್ಯದ 171 ತಾಲೂಕುಗಳ 2,252 ಗ್ರಾಮಗಳು ಈಗಲೂ ಪ್ರವಾಹ ಅಥವಾ ಭೂಕುಸಿತದ ಭೀತಿ ಎದುರಿಸುತ್ತಿವೆ.

ಪ್ರತಿ ವರ್ಷ ಮುಂಗಾರು ಮಳೆ ಸಂದರ್ಭದಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಹೈರಾಣಾಗುವಂತಾಗಿದೆ. ಇನ್ನು ಹಲವು ಕಡೆ ಭೂ ಕುಸಿತ ಸಂಭವಿಸಿ ಪ್ರಾಣ ಹಾನಿಯಂತಹ ದುರಂತ ಸಂಭವಿಸುತ್ತದೆ. ಅದೇ ರೀತಿ ಈ ವರ್ಷದ ಮುಂಗಾರು ಮಳೆಯಲ್ಲಿ ರಾಜ್ಯದ 27 ಜಿಲ್ಲೆಗಳ 171 ತಾಲೂಕುಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗುವ ಕುರಿತು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗ ಅಂದಾಜಿಸಿದೆ. ಅಲ್ಲದೆ, ಪ್ರವಾಹ ಮತ್ತು ಭೂಕುಸಿತದಂತಹ ವಿಪತ್ತುಗಳ ಪರಿಹಾರಕ್ಕಾಗಿ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗ 201.74 ಕೋಟಿ ರು. ವೆಚ್ಚದಲ್ಲಿ 342 ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಿಯಾಯೋಜನೆಯನ್ನೂ ರೂಪಿಸಿದೆ.

19.32 ಲಕ್ಷ ಜನರಿಗೆ ಸಮಸ್ಯೆ:

ಕಂದಾಯ ಇಲಾಖೆ ದಾಖಲೆಯಂತೆ ಮುಂಗಾರು ಮಳೆಯಿಂದಾಗಿ 171 ತಾಲೂಕುಗಳ, 1,288 ಗ್ರಾಪಂಗಳ 2,252 ಗ್ರಾಮಗಳು ಪ್ರವಾಹ ಅಥವಾ ಭೂಕುಸಿತದಂತಹ ವಿಪತ್ತು ಎದುರಿಸಬೇಕಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ,ಈ ವಿಪತ್ತಿನಿಂದ ಅಂದಾಜು 19.32 ಲಕ್ಷ ಜನ ಸಮಸ್ಯೆಗೆ ಸಿಲುಕಲಿದ್ದಾರೆ ಎಂದೂ ತಿಳಿಸಲಾಗಿದೆ. ಹೀಗೆ ವಿಪತ್ತು ಎದುರಾದರೆ ಜನರನ್ನು ಆರೈಕೆ ಮಾಡಲು ಮತ್ತು ಪರಿಹಾರ ನೀಡುವ ಸಲುವಾಗಿ ಕಂದಾಯ ಇಲಾಖೆ 2,298 ಕಾಳಜಿ ಕೇಂದ್ರ ಮತ್ತು ಆಶ್ರಯ ತಾಣಗಳನ್ನು ಗುರುತಿಸಿದೆ.

ಬೆಳಗಾವಿಯಲ್ಲೇ ಹೆಚ್ಚು ಗ್ರಾಮ ಸಮಸ್ಯೆ:

ಮುಂಗಾರು ಅಬ್ಬರದಿಂದ ಸಮಸ್ಯೆಗೆ ತುತ್ತಾಗುವ ಗ್ರಾಮಗಳ ಪೈಕಿ ಉತ್ತರ ಕರ್ನಾಟಕ ಭಾಗದ ಗ್ರಾಮಗಳೇ ಹೆಚ್ಚಿವೆ. ಅದರಲ್ಲಿ ಬೆಳಗಾವಿಯಲ್ಲಿ 230 ಗ್ರಾಮಗಳು ಭೂಕುಸಿತಕ್ಕಿಂತ ಪ್ರವಾಹ ಪೀಡಿತವಾಗುವ ಆತಂಕ ಎದುರಿಸುತ್ತಿವೆ. ಉಳಿದಂತೆ ಶಿವಮೊಗ್ಗದಲ್ಲಿ 206, ಉತ್ತರ ಕನ್ನಡದಲ್ಲಿ 208, ಬಾಗಲಕೋಟೆಯಲ್ಲಿ 203, ಕಲಬುರಗಿಯಲ್ಲಿ 153 ಗ್ರಾಮಗಳು ಸಮಸ್ಯೆಗೆ ಸಿಲುಕಲಿವೆ.

₹201.74 ಕೋಟಿ ಪರಿಹಾರ ಕಾಮಗಾರಿ

ಮುಂಗಾರು ಮಳೆಯಿಂದ ಉಂಟಾಗುವ ಸಮಸ್ಯೆಗಳ ನಿವಾರಣೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ₹201.74 ಕೋಟಿ ಮೊತ್ತದ ಪ್ರವಾಹ ತಡೆ ಮತ್ತು ಭೂಕುಸಿತ ಉಂಟಾಗದಂತೆ ಕ್ರಮ ಕೈಗೊಳ್ಳುವ 342 ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ 1 ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಶಿವಮೊಗ್ಗ, ಕೋಲಾರ, ಬಾಗಲಕೋಟೆ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಟ್ಟು 27 ಕಾಮಗಾರಿಗಳ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ. ಉಳಿದಂತೆ 312 ಕಾಮಗಾರಿಗಳು ಆರಂಭವಾಗಬೇಕಿದೆ.-ಬಾಕ್ಸ್‌-

ವಿಪತ್ತು ನಿರ್ವಹಣಾ ಕಾರ್ಯಪಡೆ

ವಿಪತ್ತು ಪರಿಹಾರ ಕಾಮಗಾರಿಗಳ ಅನುಷ್ಠಾನ ಜತೆಗೆ ತಕ್ಷಣಕ್ಕೆ ವಿಪತ್ತು ಎದುರಿಸುವ ಉದ್ದೇಶದಿಂದಾಗಿ ವಿಪತ್ತು ನಿರ್ವಹಣಾ ಕಾರ್ಯಪಡೆ ರಚಿಸಲಾಗಿದೆ. ಅದರಲ್ಲಿ ಪ್ರವಾಹ ಮತ್ತು ಭೂ ಕುಸಿತ ಪೀಡಿತ ಪ್ರದೇಶಗಳಲ್ಲಿ ಕಂದಾಯಾಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿ, ಪೊಲೀಸ್‌ ಪ್ರತಿನಿಧಿ, ಅಗ್ನಿಶಾಮಕ ದಳ ಪ್ರತಿನಿಧಿ ಸೇರಿ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ. ಈ ಟಾಸ್ಕ್‌ಫೋರ್ಸ್‌ಗೆ ತಮ್ಮ ವ್ಯಾಪ್ತಿಯಲ್ಲಿ ವಿವಿಧ ರೀತಿಯ ವಿಪತ್ತು ಗುರುತಿಸುವುದು, ಅದನ್ನು ಎದುರಿಸಲು ಸೂಕ್ತ ಸಿದ್ಧತೆ ನಡೆಸುವಂತೆ ಸೂಚಿಸಲಾಗಿದೆ. ಜತೆಗೆ ನೋಡಲ್‌ ಅಧಿಕಾರಿಗಳು ಮುಂಗಾರು ಅವಧಿಯಲ್ಲಿ ಪ್ರತಿ 10 ದಿನಗಳಿಗೊಮ್ಮೆ ಪ್ರವಾಹ, ಭೂ ಕುಸಿತ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಭೆ ನಡೆಸಿ ಮೇಲ್ವಿಚಾರಣೆ ಮಾಡುವಂತೆಯೂ ಸೂಚಿಸಲಾಗಿದೆ. ಜತೆಗೆ ಮಳೆ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ದೊರೆತ ಕೂಡಲೆ ಜನ-ಜಾನುವಾರುಗಳನ್ನು ಸ್ಥಳಾಂತರಿಸಬೇಕು ಎಂದು ನಿರ್ದೇಶಿಸಲಾಗಿದೆ.

ಮುಂಗಾರು ಪೂರ್ವಕ್ಕೆ 67 ಸಾವು

ಸರ್ಕಾರದ ಮಾಹಿತಿಯಂತೆ ಏ.1ರಿಂದ ಮೇ 29ರವರೆಗೆ ರಾಜ್ಯದಲ್ಲಿ 67 ಜೀವ ಹಾನಿಯಾಗಿದ್ದು, ಅವರೆಲ್ಲರ ಕುಟುಂಬದವರಿಗೆ ಕಂದಾಯ ಇಲಾಖೆಯಿಂದ ಪರಿಹಾರ ನೀಡಲಾಗಿದೆ. ಉಳಿದಂತೆ 696 ಜಾನುವಾರುಗಳ ಜೀವಹಾನಿಯಾಗಿದೆ. ಮಳೆ ಪರಿಣಾಮ 58 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 1,644 ಮನೆಗಳು ಭಾಗಶಃ ಹಾನಿಯಾಗಿವೆ. ಆ ಎಲ್ಲ ಮನೆಯ ಮಾಲೀಕರಿಗೆ ಪರಿಹಾರ ಮೊತ್ತ ವರ್ಗಾಯಿಸಲಾಗಿದೆ.

PREV
Read more Articles on

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ