ಕನ್ನಡಪ್ರಭ ವಾರ್ತೆ ಮಂಗಳೂರುಮಾನವನನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಗಗನಯಾನ ಭಾರತದ ಮುಂದಿರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಡಾ. ಎ. ಎಸ್. ಕಿರಣ್ ಕುಮಾರ್ ಹೇಳಿದ್ದಾರೆ. ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಭಾನುವಾರ ರಾಮಕೃಷ್ಣ ಮಿಷನ್ ಹಾಗೂ ಸಮತಾ ಮಹಿಳಾ ಬಳಗದ ಆಶ್ರಯದಲ್ಲಿ ‘ISRO’s Legacy and Beyond’ ಕುರಿತು ಅವರು ಉಪನ್ಯಾಸ ನೀಡಿದರು. ನಾವು ಪ್ರತಿಯೊಬ್ಬರೂ ಬಾಹ್ಯಾಕಾಶದ ಸಂಶೋಧನೆಯನ್ನು ನಮ್ಮ ಹಂತದಲ್ಲಿ ಮಾಡಬೇಕಿದೆ. ನಾವು ಪ್ರತಿಯೊಬ್ಬರೂ ವಿಜ್ಞಾನಿಯಾಗಬೇಕಿದೆ ಹಾಗೂ ದೇಶದ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕಿದೆ. ವಿಕ್ರಂ ಸಾರಾಭಾಯಿ ಹಾಗೂ ಹೋಮಿ ಜೆ ಬಾಬಾ ರಂತಹ ವ್ಯಕ್ತಿಗಳ ದೂರದೃಷ್ಟಿಯಿಂದ ಇಸ್ರೋ ಹುಟ್ಟಿಕೊಂಡಿತು. ಇಂದು ಭಾರತದ ಬೆಳವಣಿಗೆಯಲ್ಲಿ ಇಸ್ರೋ ಮಹತ್ತರ ಪಾತ್ರ ವಹಿಸಿದೆ ಎಂದರು.
ಭಾರತದ ಉಪಗ್ರಹಗಳಲ್ಲದೆ ೩೪ ಕ್ಕೂ ಹೆಚ್ಚು ರಾಷ್ಟ್ರಗಳ ೪೫೦ ಕ್ಕೂ ಹೆಚ್ಚು ಉಪಗ್ರಹಗಳನ್ನು ಭಾರತ ಉಡಾವಣೆ ಮಾಡಿದೆ. ಚಂದ್ರಯಾನ, ಮಂಗಳಯಾನ, ಆದಿತ್ಯ ಮುಂತಾದ ಹಲವಾರು ಉಪಗ್ರಹ ಕಾರ್ಯಕ್ರಮಗಳ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತು ಅರಿತುಕೊಂಡಿದೆ. ಜಗತ್ತಿನ ಎಲ್ಲ ದೇಶಗಳು ಮಿಲಿಟರಿ ಅವಶ್ಯಕತೆಗಳಿಗಾಗಿ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರೆ, ಸಾಮಾನ್ಯ ಜನರ ಅಥವಾ ದೇಶದ ಸಮಸ್ಯೆಗಳ ಪರಿಹಾರಕ್ಕಾಗಿ ಬಾಹ್ಯಾಕಾಶ ಕಾರ್ಯಕ್ರಮ ಪ್ರಾರಂಭಿಸಿದ ಏಕೈಕ ದೇಶ ಭಾರತ ಎಂದರು. ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ದಿವ್ಯಸಾನಿಧ್ಯ ವಹಿಸಿದ್ದರು.
ಕರ್ಣಾಟಕ ಬ್ಯಾಂಕ್‌ನ ಜನರಲ್ ಮೆನೇಜರ್ ಸುಮನಾ ಘಾಟೆ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಸಮತಾ ಮಹಿಳಾ ಬಳಗದ ಅಧ್ಯಕ್ಷೆ ಕಾತ್ಯಾಯನಿ ಭಿಡೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಇಸ್ರೋ ಮಾಜಿ ನಿರ್ದೇಶಕ ಡಾ. ಎಂ. ಎಂ. ನಾಯಕ್, ಸಮತಾ ಮಹಿಳಾ ಬಳಗದ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ರಾವ್ ಅತಿಥಿಯಾಗಿ ಭಾಗವಹಿಸಿದ್ದರು.
ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪ್ಪಾಡಿ ನಿರ್ವಹಿಸಿದರು.ಬೆಂಗಳೂರಿನ ಯು. ಆರ್. ರಾವ್ ಉಪಗ್ರಹ ಕೇಂದ್ರದ ವಿಶೇಷ ಬಸ್‌ನಲ್ಲಿ ಸ್ಪೇಸ್ ಆನ್ ವೀಲ್ಸ್ ವಿಜ್ಞಾನ ಪ್ರದರ್ಶನ ನಡೆಯಿತು.