ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಸಚಿವ ಚಲುವರಾಯಸ್ವಾಮಿ ಅವರ ಆಪ್ತರಾದ ಮಂಡ್ಯ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಕಾಂಗ್ರೆಸ್ ಮುಖಂಡ ಕಂಬದಹಳ್ಳಿ ಪುಟ್ಟಸ್ವಾಮಿ ಅವರು ಸಚಿವರು ನೀಡಿದ ೫ ಲಕ್ಷ ರು.ಗಳ ಮೊತ್ತದ ಡಿಡಿಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಹಸ್ತಾಂತರಿಸಿದರು.
ಹಣ ಸ್ವೀಕರಿಸಿದ್ದ ಸಾಕ್ಷಿಯಾಗಿ ಕರ್ನಾಟಕ ಸಂಘದಿಂದ ರಶೀದಿ ಮತ್ತು ಕರಾರು ಪತ್ರವನ್ನು ಸಿ.ತ್ಯಾಗರಾಜು ಮತ್ತು ಪುಟ್ಟಸ್ವಾಮಿ ಅವರಿಗೆ ನೀಡಲಾಯಿತು. ಈ ವೇಳೆ ಸಚಿವ ಚಲುವರಾಯಸ್ವಾಮಿ ಅವರ ಕಾರ್ಯವೈಖರಿ ಮತ್ತು ನಿಲುವಿನ ಬಗ್ಗೆ ಮೆಚ್ಚುಗೆ ಸೂಚಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಸಚಿವರು ನೀಡಿದ ಹಣವನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣವನ್ನು ಎಸ್‌ಎಂಕೆ ಸಮಾಜಮುಖಿ ಕಾರ‍್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದರು.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರಲ್ಲಿ ೧ ಲಕ್ಷ ರು. ನಗದು ಸಹಿತ ಪ್ರಶಸ್ತಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಅದಕ್ಕೆ ಸಚಿವರು ನೀಡಿರುವ ದತ್ತಿನಿಧಿ ಹಣವನ್ನು ಬಳಸಿಕೊಳ್ಳಲಾಗುವುದು. ಇದರೊಂದಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಈಗಾಗಲೇ ೨ ಲಕ್ಷ ರು. ನೀಡಿದ್ದಾರೆ. ಒಟ್ಟಾರೆ ೧೦ರಿಂದ ೧೫ ಲಕ್ಷ ರು. ಠೇವಣಿ ಇರಿಸಿ ದತ್ತಿನಿಧಿಯಾಗಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ, ಕರ್ನಾಟಕ ಸಂಘದ ಪದಾಧಿಕಾರಿಗಳಾದ ಎಂ.ಕೆ.ಹರೀಶ್‌ಕುಮಾರ್, ಕೋಣನಹಳ್ಳಿ ಜಯರಾಮ್, ಹನಕೆರೆ ನಾಗಪ್ಪ ಇತರರಿದ್ದರು.