ಕೃಷಿ ಸಚಿವರೇ ರಾಜ್ಯದ ರೈತರಿಗೆ ನಿಮ್ಮ ಕೊಡುಗೆ ಏನು?: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Published : Jun 30, 2025 12:34 AM

ಕುಮಾರಣ್ಣ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಮೂರನೇ ಬಾರಿಗೆ 5 ವರ್ಷ ಪೂರ್ಣಾವಧಿ ಅಧಿಕಾರ ಹಿಡಿಯಬೇಕು. ಈ ಹಿಂದೆ ಕೊಟ್ಟ 20 ತಿಂಗಳ ಆಡಳಿತ ಎಲ್ಲರ ಮನಮುಟ್ಟಿದೆ. ರಾಜ್ಯದ ಎಲ್ಲಾ ವರ್ಗದ ಜನರು ಹೆಚ್ಡಿಕೆ ಮತ್ತೆ ಸಿಎಂ ಆಗಬೇಕು ಅನ್ನೋ ಆಶಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕುಮಾರಣ್ಣರನ್ನು ಟೀಕೆ ಮಾಡುವುದನ್ನು ಬಿಟ್ಟರೆ ಕೃಷಿ ಸಚಿವರಾಗಿ 2 ವರ್ಷದಲ್ಲಿ ರೈತರಿಗೆ ನಿಮ್ಮ ಕೊಡುಗೆ ಏನು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಚಿವ ಚಲುವರಾಯಸ್ವಾಮಿ ಅವರನ್ನು ಪ್ರಶ್ನಿಸಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನಿವಾಸದ ಆವರಣದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುಮಾರಣ್ಣ ಕೇಂದ್ರ ಸಚಿವರಾಗಿ ದೆಹಲಿಯಲ್ಲಿ ರೈತರಿಗೆ ಏನು ಮಾಡ್ಬೇಕೊ ಅದನ್ನು ಮಾಡ್ತಿದ್ದಾರೆ. ಕುಮಾರಣ್ಣನ ಬಗ್ಗೆ ಟೀಕೆ ಮಾಡಿದ್ರೆ ಯಾರ ಹೊಟ್ಟೇನು ತುಂಬುವುದಿಲ್ಲ. ನೀವು ಏನು ಮಾಡಿದಿರಾ ಹೇಳಿ ಎಂದು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ನೀವು ರಾಜಕಾರಣದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದೀರಾ ಎಂದರೆ ಯಾರ ಆಶಯದಿಂದ?. ನಿಮ್ಮ ಬಗ್ಗೆ ನನಗೆ ಗೌರವವಿದೆ. ಕುಮಾರಣ್ಣನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ನಿಮ್ಮ ರಾಜಕೀಯ ಬೆಳವಣಿಗೆಗೆ ಯಾರು ಕಾರಣ ಎಂಬುವುದನ್ನು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದು ತೀಕ್ಷ್ಣವಾಗಿ ಉತ್ತರಿಸಿದರು.

ಕೇಂದ್ರ ಕೈಗಾರಿಕಾ ಸಚಿವರಾಗಿ ಕುಮಾರಣ್ಣ ಕೈಗಾರಿಕೆಗಳನ್ನು ತಂದಿಲ್ಲ ಎಂಬ ಮಾತುಗಳು ಬರುತ್ತಿವೆ. ಕೈಗಾರಿಕೆ ತರುವ ವಿಚಾರದಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯೂ ಇದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬಿಟ್ಟು ಹೆಚ್ಡಿಕೆಗೆ ಸಹಕಾರ ಕೊಡಬೇಕು ಎಂದರು.

ಕುಮಾರಣ್ಣ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಮೂರನೇ ಬಾರಿಗೆ 5 ವರ್ಷ ಪೂರ್ಣಾವಧಿ ಅಧಿಕಾರ ಹಿಡಿಯಬೇಕು. ಈ ಹಿಂದೆ ಕೊಟ್ಟ 20 ತಿಂಗಳ ಆಡಳಿತ ಎಲ್ಲರ ಮನಮುಟ್ಟಿದೆ. ರಾಜ್ಯದ ಎಲ್ಲಾ ವರ್ಗದ ಜನರು ಹೆಚ್ಡಿಕೆ ಮತ್ತೆ ಸಿಎಂ ಆಗಬೇಕು ಅನ್ನೋ ಆಶಯ ವ್ಯಕ್ತಪಡಿಸಿದ್ದಾರೆ ಎಂದರು.

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಕುಮಾರಣ್ಣನವರು ನಾಡಿಗೆ ನೀಡಿದ ಕೊಡುಗೆ ತಿಳಿಸಿ 2028ಕ್ಕೆ ಜೆಡಿಎಸ್ ಅನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸೋಣ ಎಂದರು.

ಚುನಾವಣೆ ಸೋಲು ನನ್ನ ಜೀವನಕ್ಕೆ ಪಾಠ ಕಲಿಸಿದೆ. ಮೂರು ಚುನಾವಣೆ ಸೋಲು ನನ್ನ ದೃತಿಗೆಡಿಸಿಲ್ಲ. ನಾನು ಮತ್ತಷ್ಟು ಗಟ್ಟಿಯಾಗಲು ಅವಕಾಶ ಸಿಕ್ಕಿದೆ. ಚುನಾವಣೆಯಲ್ಲಿ ನಾನು ಗೆಲ್ಲದೆ ಇದ್ದರೂ ಜನರ ಋಣ ನಮ್ಮ ಮೇಲಿದೆ. ಕುಮಾರಣ್ಣ ದೆಹಲಿಯಲ್ಲಿದ್ದರೂ ಮಂಡ್ಯ ಜನರಿಗಾಗಿ ಅವರ ಹೃದಯ ಸದಾ ಮಿಡಿಯುತ್ತಿದೆ ಎಂದರು.

ಕುಮಾರಣ್ಣ ಕೇಂದ್ರ ಸಚಿವರಾಗಿ ಏನು ಮಾಡಿದರು ಎಂದು ಆಡಳಿತ ಪಕ್ಷದವರು ಕೇಳುತ್ತಾರೆ. ಆದರೆ, ತಂಬಾಕು ಬೆಲೆಗೆ ಬೆಂಬಲ ಕೊಟ್ಟು ಗೌರವಿಸಿದ್ದು, ರಾಜ್ಯದ ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರಿಗೆ ಕುಮಾರಣ್ಣ ಪತ್ರ ಬರೆದರು. ಪತ್ರಕ್ಕೆ ಸ್ಪಂದಿಸಿ 2.5 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಗೆ ಬೆಂಬಲ ಬೆಲೆ ಕೊಟ್ಟು ಖರೀದಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷವನ್ನು ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲು ಕಾರ್ಯಕರ್ತರು ಹಾಗೂ ಮುಖಂಡರಿಗೆ ಮನವಿ ಮಾಡಿದರು. ಅತೀ ಹೆಚ್ಚು ಮದ್ದೂರು ಕ್ಷೇತ್ರದಲ್ಲಿ ಸದಸ್ಯತ್ವ ನೋಂದಣಿ ಆಗಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಡಿ.ಸಿ ತಮ್ಮಣ್ಣ ಮಾತನಾಡಿ, ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ತಳಮಟ್ಟದಲ್ಲಿ ಸಂಘಟಿಸಬೇಕು. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್‌ ಸ್ಥಾನ ಪಡೆದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಕೋರಿದರು.

ದೊಡ್ಡರಸಿನಕೆರೆ ಗೇಟ್‌ನಲ್ಲಿ ಜೆಡಿಎಸ್ ಯುವ ಮುಖಂಡ ಗುರುದೇವರಹಳ್ಳಿ ಅರವಿಂದ್ ಬೃಹತ್ ಹೂವಿನ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕರಾದ ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಜಿಪಂ ಮಾಜಿ ಸದಸ್ಯ ಕಂಸಾಗರ ರವಿ, ಮುಖಂಡರಾದ ಸಂತೋಷ್ ತಮ್ಮಣ್ಣ, ಚಾಮನಹಳ್ಳಿ ಸ್ವಾಮಿ, ಪ್ರಿಯಾಂಕಾ, ಎ.ಬಿ.ಹಳ್ಳಿ ಚಂದ್ರಣ್ಣ, ಮಾದನಾಕನಹಳ್ಳಿ ರಾಜಣ್ಣ, ಕರಡಕೆರೆ ಹನುಮಂತೇಗೌಡ, ಕೆ.ಟಿ.ಸುರೇಶ್, ಅಣ್ಣೂರು ಯೋಗೇಂದ್ರ, ವಿನು ಸೇರಿದಂತೆ ಹಲವರು ಭಾಗವಹಿಸಿದ್ದರು.