ನರಗುಂದದಲ್ಲಿ ಬರಗಾಲದಲ್ಲೂ ನೆರವಾದ ಅರಣ್ಯ ಕೃಷಿ

KannadaprabhaNewsNetwork |  
Published : Jul 18, 2026, 01:00 AM IST
(17ಎನ್.ಆರ್.ಡಿ4 ಶ್ರೀಪಾದ ವಿಶ್ವೇಶ್ವರವರ ತಮ್ಮ ಜಮೀನಿನಲ್ಲಿ ಅರಣ್ಯ ಕೃಷಿ ಮಾಡಿರುವುದು.) | Kannada Prabha

ಸಾರಾಂಶ

ನರಗುಂದ ಪಟ್ಟಣದ ದಂಡಾಪುರ ಓಣಿಯ ಶ್ರೀಪಾದ ವಿಶ್ವೇಶ್ವರ ಅವರು ವೃತ್ತಿಯಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರು. ಪ್ರವೃತ್ತಿಯಲ್ಲಿ ಕೃಷಿಕರು.

ಎಸ್.ಜಿ. ತೆಗ್ಗಿನಮನಿ

ನರಗುಂದ: ಅರಣ್ಯ ಕೃಷಿ ವಿಧಾನವು ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟವಾಗುವುದನ್ನು ತಡೆದು ಅನ್ನದಾತರಿಗೆ ಆಸರೆಯಾಗುತ್ತದೆ ಎಂಬುದಕ್ಕೆ ಇಲ್ಲೊಬ್ಬ ರೈತರು ನಿದರ್ಶನವಾಗಿದ್ದಾರೆ.

ನರಗುಂದ ಪಟ್ಟಣದ ದಂಡಾಪುರ ಓಣಿಯ ಶ್ರೀಪಾದ ವಿಶ್ವೇಶ್ವರ ಅವರು ವೃತ್ತಿಯಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರು. ಪ್ರವೃತ್ತಿಯಲ್ಲಿ ಕೃಷಿಕರು. ಚಿಕ್ಕನರಗುಂದ ಗ್ರಾಮದ ರಸ್ತೆಯ ಬಳಿ ಮಲಪ್ರಭಾ ಬಲದಂಡೆ ಮುಖ್ಯ ಕಾಲುವೆ ಪಕ್ಕದಲ್ಲಿನ ಹೊಲದ ಬದುವಿನಲ್ಲಿ ಮತ್ತು ಕೆರೆ ದಡದಲ್ಲಿ ಸುಮಾರು 15 ಸಾವಿರ ಸುಬಾಬುಲ್, 3 ಸಾವಿರ ಗಾಳಿ ಗಿಡ ಸೇರಿದಂತೆ ಹತ್ತಾರು ನೇರಳೆ, ತೆಂಗು, ನುಗ್ಗೆ ಮತ್ತು ಹುಣಸೆ ಮರಗಳನ್ನು 3 ವರ್ಷದ ಹಿಂದೆ ನೆಟ್ಟಿದ್ದರು. ಈಗ ಅವುಗಳ ಪೈಕಿ ಹಲವು ಫಲ ನೀಡುವ ಹಂತಕ್ಕೆ ಬೆಳೆದು ನಿಂತಿದೆ.

ಮರಗಳಿಂದ ಲಾಭ: ಸುಬಾಬುಲ್ ಗಿಡಗಳ ಎಲೆಗಳು ಅಧಿಕ ಪ್ರೋಟಿನ್ ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ. ಇದು ಹಸು, ಆಡು ಮತ್ತು ಕುರಿಗಳಿಗೆ ಅತ್ಯುತ್ತಮ ಪೌಷ್ಟಿಕಾಂಶದ ಆಹಾರವಾಗಿದೆ. ಜತೆಗೆ ಕಾಗದ ತಯಾರಿಕೆಗಾಗಿ ಈ ಮರದ ತಿರುಳನ್ನು ಬಳಸಲಾಗುತ್ತದೆ. ಹೀಗಾಗಿ ವಾಣಿಜ್ಯ ಉದ್ದೇಶಕ್ಕಾಗಿಯೂ ಇದನ್ನು ಬೆಳೆಯಲಾಗುತ್ತದೆ. ಉತ್ತಮ ಗುಣಮಟ್ಟದ ಸೌದೆಯನ್ನು ಒದಗಿಸುತ್ತದೆ. ಮರದ ಬೇಲಿಗಳನ್ನು ನಿರ್ಮಿಸಲು ಸಹ ಬಳಕೆಯಾಗುತ್ತದೆ.

₹10ರಿಂದ ₹15 ಲಕ್ಷ ಲಾಭ: ಇವರು ತಮ್ಮ 10 ಎಕರೆ ಭೂಮಿಯ ಬದುಗಳಲ್ಲಿ ಮೂರು ವರ್ಷದ ಹಿಂದೆ ಸುಬಾಬುಲ್ ಗಿಡ ಮತ್ತು ಗಾಳಿಗಿಡಗಳನ್ನು ಬೆಳೆಸಿದ್ದಾರೆ. 4 ವರ್ಷದ ನಂತರ ಕಟಾವು ಮಾಡಿದಾಗ 300 ಟನ್ ಹಸಿ ಕಟ್ಟಿಗೆ ಸಿಗುತ್ತದೆ. ಸದ್ಯದ ಮಾರುಕಟ್ಟೆ ಬೆಲೆ ಟನ್ ಕಟ್ಟಿಗೆಗೆ 5 ಸಾವಿರ ರುಪಾಯಿ ಇದೆ. ಕಟಾವು ಮಾಡಿದ ನಂತರವೂ ಮತ್ತೆ ಚಿಗುರೊಡೆಯುತ್ತದೆ. ಹೀಗೆ ಒಮ್ಮೆ ಬೆಳೆಸಿದ ಗಿಡಗಳು 30 ವರ್ಷದವರೆಗೆ ಬಾಳಿಕೆ ಬರುತ್ತವೆ. ಒಟ್ಟಾರೆ ಅರಣ್ಯ ಕೃಷಿ ಮಾಡಿದರೆ ಲಾಭ ಬರುತ್ತದೆ ಎನ್ನುತ್ತಾರೆ ಶ್ರೀಪಾದ ವಿಶ್ವೇಶ್ವರ(ಮೊ. 9448344103) ಅವರು.ಕೃಷಿ ಜತೆಗೆ ಅರಣ್ಯ ಕೃಷಿ ಮಾಡಿದರೆ, ಅತಿವೃಷ್ಟಿ, ಅನಾವೃಷ್ಟಿ ಅಥವಾ ಬೆಲೆ ಏರಿಳಿತ ಸಂದರ್ಭದಲ್ಲಿ ರೈತರಿಗೆ ವರದಾನವಾಗಲಿದೆ. ಆದ್ದರಿಂದ ರೈತರು ಬೆಳೆಹಾನಿಯಾಯಿತೆಂದು ಅಂಜದೇ ಅರಣ್ಯ ಕೃಷಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತರು ಸಮಾಜ ಕಾಯುವ ಯೋಧರು: ಅಶೋಕ ಹಾಸ್ಯಗಾರ
ಮುಂಗಾರು ಮುನಿಸು: ಮರಿಯಮ್ಮನಹಳ್ಳಿ ತಾಂಡಾದ ಸಾವಿರಾರು ಮಂದಿ ಗುಳೆ