ಟ್ರಾಫಿಕ್‌ ಇಲ್ಲದಿದ್ದರೆ ಸಿಗ್ನಲ್‌ ಅವಧಿ ಕಡಿತಗೊಳಿಸುವ ಎಐ ಕ್ಯಾಮರಾ!

KannadaprabhaNewsNetwork |  
Published : Aug 02, 2026, 02:30 AM IST
ಮಂಗಳೂರು ನಗರದಲ್ಲಿ ಎಐ ಆಧಾರಿತ ಸಿಸಿ ಕ್ಯಾಮರಾ  | Kannada Prabha

ಸಾರಾಂಶ

ವಾಹನ ನಿಬಿಡದಿಂದ ಸುಗಮ ಸಂಚಾರಕ್ಕೆ ಸವಾಲು ಆಗಿರುವ ಮಂಗಳೂರಿನಲ್ಲಿ ಈಗ ಸ್ಮಾರ್ಟ್‌ಸಿಟಿಯಿಂದ ಅತ್ಯಾಧುನಿಕ ಎಐ(ಕೃತಕ ಬುದ್ಧಿಮತ್ತೆ) ಚಾಲಿತ ಸಿಸಿ ಕ್ಯಾಮರಾಗಳು ಸುಗಮ ಸಂಚಾರಕ್ಕೆ ಬಲ ನೀಡುತ್ತಿವೆ.

ಮಂಗಳೂರು: ವಾಹನ ನಿಬಿಡದಿಂದ ಸುಗಮ ಸಂಚಾರಕ್ಕೆ ಸವಾಲು ಆಗಿರುವ ಮಂಗಳೂರಿನಲ್ಲಿ ಈಗ ಸ್ಮಾರ್ಟ್‌ಸಿಟಿಯಿಂದ ಅತ್ಯಾಧುನಿಕ ಎಐ(ಕೃತಕ ಬುದ್ಧಿಮತ್ತೆ) ಚಾಲಿತ ಸಿಸಿ ಕ್ಯಾಮರಾಗಳು ಸುಗಮ ಸಂಚಾರಕ್ಕೆ ಬಲ ನೀಡುತ್ತಿವೆ. ಮಂಗಳೂರು ನಗರದಲ್ಲೇ ಸುಮಾರು 181ಕ್ಕೂ ಅಧಿಕ ಎಐ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇಡೀ ಮಂಗಳೂರು ಎಐ ಕಣ್ಗಾವಲಿನಲ್ಲಿದೆ. ಇದಲ್ಲದೆ ಸಂಚಾರಿ ಪೊಲೀಸ್ ಇಲಾಖೆಯಿಂದಲೂ ನಾಲ್ಕು ಕಡೆ ಡಾಟಾ ಕೇಂದ್ರೀಕೃತ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ಸುಗಮ ಸಂಚಾರಕ್ಕೆ ಸಂಚಾರಿ ಸ್ನೇಹಿ ತಂತ್ರಜ್ಞಾನ ಅಳವಡಿಸಲಾಗಿದೆ. ಟ್ರಾಫಿಕ್ ಇಲ್ಲದಿದ್ದರೆ ಸಿಗ್ನಲ್‌ ಅವಧಿ ಕುಂಠಿತ!: ನಗರ ಸಂಚಾರ ವ್ಯವಸ್ಥೆಯಲ್ಲಿ ಟ್ರಾಫಿಕ್‌ ಇರುವಾಗ ಸಿಗ್ನಲ್‌ಗಳು ಕೆಲವು ನಿಮಿಷ ವರೆಗೆ ಸಂಚಾರವನ್ನು ನಿಯಂತ್ರಿಸುವುದು ಮಾಮೂಲಿ. ಟ್ರಾಫಿಕ್‌ ಇಲ್ಲದಿದ್ದರೂ ಅಷ್ಟೇ ಹೊತ್ತು ಸಿಗ್ನಲ್‌ ಮುಕ್ತಗೊಳ್ಳಲು ಅನಿವಾರ್ಯವಾಗಿ ಕಾಯುವ ಪರಿಸ್ಥಿತಿ ಇರುತ್ತದೆ. ಆದರೆ ಎಐ ಕ್ಯಾಮರಾ ವ್ಯವಸ್ಥೆಯಲ್ಲಿ ಈ ರೀತಿ ವಿನಾ ಕಾಯುವಿಕೆಗೆ ಆಸ್ಪದ ಇಲ್ಲ. ವಾಹನ ದಟ್ಟಣೆಯನ್ನು ನೋಡಿಕೊಂಡು ಎಐ ಕ್ಯಾಮರಾ ಸ್ವಯಂ ಚಾಲಿತವಾಗಿ ಸಂಚಾರವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ವಾಹನಗಳು ಸಿಗ್ನಲ್‌ಗೆ ತುಂಬ ಹೊತ್ತು ಕಾಯುವಿಕೆ ನಿವಾರಣೆಯಾಗುತ್ತದೆ. ಮಾತ್ರವಲ್ಲ ಸಂಚಾರಿ ಪೊಲೀಸರಿಗೆ ಟ್ರಾಫಿಕ್‌ ನಿಯಂತ್ರಣಕ್ಕೆ ಬಹಳ ನೆರವಾಗುತ್ತವೆ.

28 ಪ್ರಮುಖ ಜಂಕ್ಷನ್‌ಗಳಲ್ಲಿ ಕ್ಯಾಮರಾ: ಮಂಗಳೂರು ಮಹಾನಗರದಾದ್ಯಂತ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸುಮಾರು 169 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ 28 ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮರಾ ಇದೆ.

ಅಡಂಕುದ್ರು ನೇತ್ರಾವತಿ ಬ್ರಿಡ್ಜ್‌ ಬಳಿ, ಜಪ್ಪಿನಮೊಗರು, ಕುಂಟಿಕಾನ ಅಗ್ನಿಶಾಮಕ ಠಾಣೆ ಬಳಿ, ಕೊಟ್ಟಾರಚೌಕಿ ಮಹೇಂದ್ರ ಶೋರೂಂ ಬಳಿ, ಮಹಾಕಾಳಿ ಪಡ್ಪು ಕ್ರಾಸ್‌ ಸಿಟಿ ಪ್ರವೇಶ, ಮಂಗಳಾದೇವಿ ಮಂಕಿಸ್ಟ್ಯಾಂಡ್‌, ಪಾಂಡೇಶ್ವರ ಶ್ರೀನಿವಾಸ ಕಾಲೇಜು, ಎ.ಬಿ. ಶೆಟ್ಟಿ ವೃತ್ತ, ಕ್ಲಾಕ್‌ ಟವರ್‌ ಜಂಕ್ಷನ್‌, ಕೆಎಸ್‌ಆರ್‌ ರಸ್ತೆ ಸಿಟಿ ಸೆಂಟರ್‌ ಬಳಿ, ಪಿವಿಎಸ್‌ ಜಂಕ್ಷನ್‌, ಎಂ.ಜಿ ರೋಡ್‌ ಟಿಎಂಎ ಪೈ ಹಾಲ್‌ ಬಳಿ, ಲಾಲ್‌ಬಾಗ್‌ ಜಂಕ್ಷನ್‌, ಚಿಲಿಂಬಿ ಬಳಿ, ಉರ್ವ ಪೊಲೀಸ್‌ ಠಾಣೆ ಬಳಿ, ಕೊಟ್ಟಾರಚೌಕಿ ಸಿಟಿ ಎಂಟ್ರಿ, ಕೆಎಸ್‌ಆರ್‌ಟಿಸಿ ಜಂಕ್ಷನ್‌, ಕುಂಟಿಕಾನ ಸಿಟಿ ಪ್ರವೇಶ, ಬಂಟ್ಸ್‌ ಹಾಸ್ಟೆಲ್‌ ಭಾರತ್‌ ಬೀಡಿ ಜಂಕ್ಷನ್‌ ಬಳಿ, ಕದ್ರಿ ಮಲ್ಲಿಕಟ್ಟೆ ಸಿಟಿ ಆಸ್ಪತ್ರೆ ಬಳಿ, ನಂತೂರು ಸಿಟಿ ಪ್ರವೇಶದಲ್ಲಿ, ಶಿವಭಾಗ್‌ ಮೆಸ್ಕಾಂ ಕಚೇರಿ ಬಳಿ, ಹಾರ್ಟಿಕಲ್ಚರ್‌ ಜಂಕ್ಷನ್‌, ಬೆಂದೂರ್‌ವೆಲ್‌, ಕರಾವಳಿ ಜಂಕ್ಷನ್‌, ಪಂಪ್‌ವೆಲ್‌ ಗಣೇಶ್‌ ಮೆಡಿಕಲ್‌ ಬಳಿ ಸಿಟಿ ಪ್ರವೇಶ, ಹಳೆ ಕಂಕನಾಡಿ ರಸ್ತೆ ಸಿಟಿ ಪ್ರವೇಶ, ಡಾ.ಅಂಬೇಡ್ಕರ್‌ ಜಂಕ್ಷನ್‌ ಬಳಿ ಈ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಸಂಚಾರಿ ಪೊಲೀಸ್ ವತಿಯಿಂದ ಪ್ರತ್ಯೇಕವಾಗಿ ಕುಳಾಯಿ ಹಾಗೂ ಸಹ್ಯಾದ್ರಿ ಜಂಕ್ಷನ್‌ಗಳ ವಿವಿಧ ಸ್ಥಳಗಳಲ್ಲಿ ಒಟ್ಟು 12 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಮಿತಿ ಮೀರಿದ ಸಂಚಾರಕ್ಕೂ ಇನ್ನು ದಂಡ: ನಗರ ವ್ಯಾಪ್ತಿಯಲ್ಲಿ ಇನ್ನು ವೇಗದ ಮಿತಿ ಮೀರಿದರೆ ಅದಕ್ಕೂ ದಂಡ ಪಾವತಿಸಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಯಲ್ಲಿ ಒಟ್ಟು ಆರು ವಿವಿಧ ತಪ್ಪುಗಳಿಗೆ ಕೇಸು ಅಥವಾ ದಂಡ ಪಾವತಿಗೆ ಅವಕಾಶ ಇದೆ. ಇಲ್ಲಿವರೆಗೆ ನಗರದಲ್ಲಿ ಮಿತಿ ಮೀರಿದ ವಾಹನ ಚಾಲನೆ ಹೊರತುಪಡಿಸಿ ಬೇರೆಲ್ಲ ತಪ್ಪುಗಳಿಗೆ ದಂಡ ವಸೂಲಿ ಮಾಡಲಾಗುತ್ತದೆ. ಆದರೆ ಮಿತಿ ಮೀರಿದ ವೇಗದ ಕಾರಣ ಅಲ್ಲಲ್ಲಿ ಅಪಘಾತದ ಪ್ರಕರಣಗಳು ಸಂಭವಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಇನ್ನು ಮುಂದೆ ಮಿತಿ ಮೀರಿದ ವೇಗಕ್ಕೂ ಕೇಸ್‌ ದಾಖಲಿಸಿ ದಂಡ ವಿಧಿಸಲಾಗುತ್ತದೆ ಎಂದು ಸಂಚಾರಿ ಪೊಲೀಸ್‌ ಮೂಲಗಳು ತಿಳಿಸಿವೆ. ಆರೋಪಿಗಳ ಪತ್ತೆಗೆ ಸಿಸಿ ಕ್ಯಾಮರಾ ಸಾಥ್‌!: ಮಹಾನಗರದಲ್ಲಿ ನಡೆಯುವ ಯಾವುದೇ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಿಸಿ ಕ್ಯಾಮರಾಗಳು ಅತ್ಯಂತ ಉಪಕಾರಿಯಾಗಿ ಪರಿಣಮಿಸಿವೆ. ಕಳೆದ ಕೆಲವು ಸಮಯಗಳ ಹಿಂದೆ ನಡೆದ ದರೋಡೆ ಪ್ರಕರಣ, ಇರಿತ, ಕೊಲೆ ಪ್ರಕರಣಗಳಲ್ಲಿ ಪರಾರಿಯಾಗುವ ಆರೋಪಿಗಳ ಜಾಡು ಪತ್ತೆ ಮಾಡಿ ಕೊಡುವುದು ಇದೇ ಸಿಸಿ ಕ್ಯಾಮರಾಗಳು. ಹಾಗಾಗಿ ಪೊಲೀಸರ ತನಿಖಾ ಆಯಾಮಗಳಿಗೆ ಸಿಸಿ ಕ್ಯಾಮರಾಗಳು ದೊಡ್ಡ ಆಧಾರಸ್ತಂಭವಾಗಿದೆ. ಹೊರ ರಾಜ್ಯದ ವಾಹನಗಳಿಗೂ ಈಗ ನೋಟಿಸ್‌ : ಸಂಚಾರ ನಿಯಮ ಉಲ್ಲಂಘಿಸಿ ಬಳಿಕ ದಂಡವನ್ನು ಕ್ಲಪ್ತ ಸಮಯದಲ್ಲಿ ಪಾವತಿಸದಿದ್ದರೆ ಅದಕ್ಕೂ ಬಡ್ಡಿ ಚಕ್ರಬಡ್ಡಿ ಸಮೇತ ವಸೂಲಿ ಮಾಡುವ ಅವಕಾಶ ಮುಕ್ತವಾಗಿದೆ. ಈ ಹಿಂದೆ ಹೊರರಾಜ್ಯದ ವಾಹನಗಳು ಇಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ನೋಟಿಸ್‌ ನೀಡಲು ಅವಕಾಶ ಇರಲಿಲ್ಲ, ಈಗ ‘ಇ ವಾಹನ’ ಕಾರ್ಯರೂಪಕ್ಕೆ ಬಂದ ಬಳಿಕ ಹೊರರಾಜ್ಯದ ವಾಹನಗಳಿಗೂ ನೋಟಿಸ್‌ ಜಾರಿಗೊಳಿಸಿ ದಂಡ ವಸೂಲಿ ಮಾಡಬಹುದಾಗಿದೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಎಲ್ಲ ಸಿಸಿ ಕ್ಯಾಮರಾಗಳು ಸುಸ್ಥಿತಿಯಲ್ಲಿದ್ದು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಆಗಿಂದಾಗ್ಯೆ ದಾಖಲಿಸಲಲಾಗುತ್ತಿದೆ. ಇನ್ನು ಮುಂದೆ ಮಿತಿ ಮೀರಿದ ವೇಗಕ್ಕೂ ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತದೆ. -ರವಿಶಂಕರ್‌, ಡಿಸಿಪಿ ಸಂಚಾರ ವಿಭಾಗ, ಮಂಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗುರುಳಿದ ಆಲದ ಮರ: ವಾಹನ ಸವಾರರು ಪಾರು
ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ: ಅನಂತ್ ಮೈಸೂರು