ಕನ್ನಡಪ್ರಭ ವಾರ್ತೆ ಮಡಿಕೇರಿ
ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಪರಿಣಾಮ ಸುಮಾರು 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆಯಾಗಿದೆ. ಇದರಿಂದ ಹಾರಂಗಿ-ಯಡವನಾಡ-ಸೋಮವಾರಪೇಟೆ ಸಂಪರ್ಕ ಬಂದ್ ಆಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದು, ಸೇತುವೆಯಲ್ಲಿ ವಾಹನಗಳು ಸಂಚರಿಸದಂತೆ ಬ್ಲಾಕ್ ಮಾಡಲಾಗಿದೆ.
ಬ್ರಹ್ಮಗಿರಿ ತಪ್ಪಲು ಪ್ರದೇಶ, ತಲಕಾವೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಸ್ನಾನಘಟ್ಟ ಪ್ರದೇಶ, ತ್ರಿವೇಣಿ ಸಂಗಮದ ಉದ್ಯಾನವನ ಮುಳುಗಡೆಯಾಗಿದೆ. ಸ್ನಾನಘಟ್ಟ ಸಮೀಪದ ಅಂಗಡಿಗಳು ಜಲಾವೃತಗೊಂಡಿವೆ. ಮೇಲ್ಸೇತುವೆ ಇರುವುದರಿಂದ ರಸ್ತೆ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೆಲ ಭಾಗದಲ್ಲಿ ಯಾರೂ ಸಂಚರಿಸಿದಂತೆ ಸೂಚನಾ ಫಲಕ ಹಾಕಲಾಗಿದೆ.ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಗಾಳಿ ಮಳೆ ಜೋರಾಗಿದ್ದು ಭಾಗಮಂಡಲ ಸೇರಿದಂತೆ ಇತರ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿದುಕೊಂಡಿದೆ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಬಲಮುರಿ, ಗುಹ್ಯ ಪ್ರದೇಶದಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಸ್ಥಳೀಯರು ಮಣ್ಣು ಕುಸಿಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸುಮಾರು ಮೂರರಿಂದ ನಾಲ್ಕು ಅಡಿಯ ಬೃಹತ್ ತಡೆಗೋಡೆಯು ಕುಸಿದಿದೆ.
ಶ್ರೀಮಂಗಲ ಹೋಬಳಿ ಟಿ ಶೆಟ್ಟಿಗೇರಿ ಗ್ರಾಮದ ಎಚ್.ಆರ್. ಮಂಜುಳ ಅವರ ಮನೆಯ ಗೋಡೆ ಮಳೆಯಿಂದಾಗಿ ಕುಸಿದು ಮನೆಗೆ ಹಾನಿಯಾಗಿದೆ.
ವಿರಾಜಪೇಟೆ ತಾಲೂಕಿನಲ್ಲಿ 35.55 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 29.43 ಮಿ.ಮೀ , ಸೋಮವಾರಪೇಟೆ ತಾಲೂಕಿನಲ್ಲಿ 23.90 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 39 ಮಿ.ಮೀ. ಮಳೆಯಾಗಿದೆ. ಹೋಬಳಿ ವಿವರ: ಮಡಿಕೇರಿ 86, ನಾಪೋಕ್ಲು 45.20, ಸಂಪಾಜೆ 87.50, ಭಾಗಮಂಡಲ 125.60, ವಿರಾಜಪೇಟೆ 33.60, ಅಮ್ಮತ್ತಿ 37.50, ಹುದಿಕೇರಿ 28.70, ಶ್ರೀಮಂಗಲ 68, ಪೊನ್ನಂಪೇಟೆ 15, ಬಾಳೆಲೆ 6.01, ಸೋಮವಾರಪೇಟೆ 103.40, ಶನಿವಾರಸಂತೆ 52, ಶಾಂತಳ್ಳಿ 180, ಕೊಡ್ಲಿಪೇಟೆ 40.20, ಕುಶಾಲನಗರ 31.80, ಸುಂಟಿಕೊಪ್ಪ 46.20 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.83 ಅಡಿಗಳು. ಕಳೆದ ವರ್ಷ ಇದೇ ದಿನ 2855.46 ಅಡಿಗಳು. ಹಾರಂಗಿಯಲ್ಲಿ ಸುರಿದ ಮಳೆ 39.60 ಮಿ.ಮೀ., ಕಳೆದ ವರ್ಷ ಇದೇ ದಿನ 3.20 ಮಿ.ಮೀ., ಇಂದಿನ ನೀರಿನ ಒಳಹರಿವು 9896 ಕ್ಯುಸೆಕ್, ಕಳೆದ ವರ್ಷ ಇದೇ ದಿನ 4817 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 20000 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 3000 ಕ್ಯುಸೆಕ್. ನಾಲೆಗೆ 500 ಕ್ಯುಸೆಕ್.