ಬಳ್ಳಾರಿ: ಜನ ಜಾಗೃತಗೊಂಡರೆ ಮಾತ್ರ ಏಡ್ಸ್ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ ತಿಳಿಸಿದರು.
2013ರ ಅಂಕಿ-ಸಂಖ್ಯೆಗಳ ಪ್ರಕಾರ ದೇಶದಲ್ಲಿ 38 ಲಕ್ಷ ಮಂದಿ ಎಚ್‌ಐವಿ ಸೋಂಕಿತರಿದ್ದು, ಪ್ರಪಂಚದಲ್ಲಿ 3.8 ಕೋಟಿ ಮಂದಿ ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ. ಏಡ್ಸ್ ರೋಗ ಒಂದು ಅಪಾಯಕಾರಿ ಕಾಯಿಲೆಯಾಗಿದ್ದು, ಇದಕ್ಕೆ ಚಿಕಿತ್ಸೆಗಿಂತ ಮೊದಲು ಮುಂಜಾಗ್ರತೆ ಕ್ರಮವಹಿಸುವುದು ಅತ್ಯಾವಶ್ಯಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಈ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಿ ಎಚ್.ಐ.ವಿ ಸೋಂಕಿತರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿವೆ. ಏಡ್ಸ್ ಸಂಪೂರ್ಣ ತಡೆಗಟ್ಟಲು ಅನೇಕ ಯೋಜನೆಗಳ ಮೂಲಕ ಕಾರ್ಯಕ್ರಮ ರೂಪಿಸಿವೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಯೂ ಆದ ಡಾ. ಇಂದ್ರಾಣಿ ವಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 4,53,000 ಜನರಿಗೆ ಹೆಚ್‌ಐವಿ ಪರೀಕ್ಷೆ ಕೈಗೊಂಡಿದ್ದು, ಅದರಲ್ಲಿ 13,692 ಮಂದಿಗೆ ಸೋಂಕು ತಗುಲಿದೆ. 2,127 ಗಂಡು, 2,704 ಹೆಣ್ಣು, 34 ಲಿಂಗತ್ವ ಅಲ್ಪಸಂಖ್ಯಾತರು, 329 ಮಕ್ಕಳು ಒಳಗೊಂಡು 5194 ಮಂದಿ ಎಆರ್‌ಟಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಅದೇ ರೀತಿಯಾಗಿ 2025ರ ಏಪ್ರಿಲ್‌ನಿಂದ ಇಲ್ಲಿ ವರೆಗೆ 25,099 ಗರ್ಭೀಣಿಯರನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, ಹೊಸದಾಗಿ 6 ಗರ್ಭೀಣಿಯರಲ್ಲಿ ಸೋಂಕು ಪಾಸಿಟಿವ್ ಕಂಡುಬಂದಿದೆ. ಹಳೆಯದಾಗಿ ಎಆರ್‌ಟಿ ಕೇಂದ್ರದಲ್ಲಿ 28 ಗರ್ಭೀಣಿ ಮಹಿಳೆಯರಿದ್ದರು. ಅದರಲ್ಲಿ 15 ಜನರ ಮಕ್ಕಳಿಗೆ ಪರೀಕ್ಷೆ ಕೈಗೊಂಡಿದ್ದು, 2 ಮಕ್ಕಳಿಗೆ 18 ತಿಂಗಳ ಕಳೆದ ಮೇಲೆ ಸೋಂಕು ದೃಢಪಟ್ಟಿದೆ. ಇದರಿಂದ ಮುಂದಿನ ದಿನಗಳಲ್ಲಿ ತಾಯಿಯಿಂದ ಮಗುವಿಗೆ ಹರಡುವ ಸೋಂಕನ್ನು ತಡೆಯಬೇಕಿದೆ. ಅದೇರೀತಿಯಾಗಿ 2030ರ ವೇಳೆಗೆ ಹೊಸ ಎಚ್‌ಐವಿ ಸೋಂಕು ಪ್ರಕರಣಗಳನ್ನು ಶೂನ್ಯಕ್ಕೆ ತರಲು ಶ್ರಮಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಅಸಾಂಕ್ರಾಮಿಕ ಅಧಿಕಾರಿ ಡಾ. ವೀರೇಂದ್ರ ಕುಮಾರ್, ಎಆರ್ ಟಿ ವೈದ್ಯಾಧಿಕಾರಿ ಡಾ. ದಿನೇಶ್ ಗುಡಿ, ರಾಜ್ಯ ಸಂಯೋಜಕ ರಮೇಶ್, ನಿತ್ಯಜೀವನ ಸಂಸ್ಥೆಯ ಅಧ್ಯಕ್ಷರಾದ ಹೇಮಲತ, ಡ್ಯಾಪ್ಕು ಜಿಲ್ಲಾ ಮೇಲ್ವಿಚಾರಕ ಬಿ.ಗಿರೀಶ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಬಿಎಂಸಿಆರ್ ಸಿ ವೈದ್ಯಾಧಿಕಾರಿ ಡಾ. ಸಂಗೀತ ಸೇರಿದಂತೆ ಮೈತ್ರಿ, ಸಂಗಮ, ಸೌಖ್ಯ ಬೆಳಕು ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ರಕ್ತಕೇಂದ್ರದ ಅಧಿಕಾರಿಗಳು, ಐಟಿಸಿಟಿ, ಎನ್‌ಟಿಪಿ, ಎಆರ್‌ಟಿ ಸಿಬ್ಬಂದಿ, ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.ಗಮನ ಸೆಳೆದ ಜಾಥಾ:
ಈ ವೇಳೆ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು ಸಾರ್ವಜನಿಕರು ಏಡ್ಸ್ ಕಾಯಿಲೆಯ ವಿರುದ್ದ ಜಾಗೃತಿ ಮೂಡಿಸುವ ಫಲಕಗಳನ್ನು ಹಾಗೂ ಬ್ಯಾನರ್ ಗಳನ್ನು ಪ್ರದರ್ಶಿಸಿದರು. ಈ ವೇಳೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ, ಜಾಗೃತಿ ಮೂಡಿಸಿದರು.