‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ

KannadaprabhaNewsNetwork |  
Published : Nov 05, 2025, 02:00 AM IST
Shakti Scheme

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ವಾಯುಮಾಲಿನ್ಯ ನಿಯಂತ್ರಣಕ್ಕೆ ಕೊಡುಗೆ ನೀಡಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

 ಬೆಳಗಾವಿ/ಹುಬ್ಬಳ್ಳಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ವಾಯುಮಾಲಿನ್ಯ ನಿಯಂತ್ರಣಕ್ಕೆ ಕೊಡುಗೆ ನೀಡಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. 

ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವಾಯು ಮಾಲಿನ್ಯ ತಡೆಯಲು ಸಾರ್ವಜನಿಕ ಸಾರಿಗೆ ಬಳಸುವುದು ಅನಿವಾರ್ಯ. ಈಗ ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ಮಹಿಳೆಯರು ಸಾರ್ವಜನಿಕ ವಾಹನಗಳನ್ನು ಬಳಸಲು ಆರಂಭಿಸಿದ್ದು, ಇದರಿಂದ ವಾಯುಮಾಲಿನ್ಯ ಸ್ವಲ್ಪವಾದರೂ ನಿಯಂತ್ರಣಕ್ಕೆ ಬಂದಿದೆ ಎಂದರು.

ಕೈಗಾರಿಕೆಗಳಿಂದಲೂ ವಾಯು ಮಾಲಿನ್ಯ ಉಂಟಾಗುತ್ತಿದ್ದು, ಇದಕ್ಕೆ ಮಂಡಳಿ ಚಾಟಿ ಬೀಸಿದೆ. ಮಂಡಳಿಯು ಪ್ರತಿ ದಿನ ವಾಯು ಗುಣಮಟ್ಟ ಮಾಪನ ಮಾಡುತ್ತಿದೆ. ಮಾಲಿನ್ಯ ನಿಯಂತ್ರಣ ಮಾಡುವುದು ಕೇವಲ ಕಾಯಿದೆಯಿಂದ ಸಾಧ್ಯವಾಗುವುದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಾಧ್ಯವಿಲ್ಲ. ಜನರಿಗೆ ಈ ಬಗ್ಗೆ ಜಾಗೃತಿ ಇರಬೇಕು.  

ಅದೇ ಕಾರಣಕ್ಕೆ ಸುವರ್ಣ ಮಹೋತ್ಸವವನ್ನು ಎಲ್ಲಾ ಕಾರ್ಯಕ್ರಮಗಳಂತೆ ಬೆಂಗಳೂರಿನಲ್ಲಿ ಮಾತ್ರ ಮಾಡದೆ ರಾಜ್ಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮವನ್ನಾಗಿ ರೂಪಿಸಲಾಗಿದೆ ಎಂದರು.ಪ್ರತಿ ದಿನ 3.5 ಲಕ್ಷದಿಂದ 4 ಲಕ್ಷ ಹಾಲಿನ ಪಾಕೆಟ್ ಬಳಕೆ ಮಾಡಲಾಗುತ್ತದೆ. 

ಹಾಲಿನ ಪಾಕೆಟ್ ಅನ್ನು ಮೂಲೆಯಲ್ಲಿ ಕತ್ತರಿಸಿ ತುಣಕನ್ನು ಯಾವುದೇ ರೀತಿಯಲ್ಲಿ ಸಂಸ್ಕರಿಸದೆ ಎಸೆಯಲಾಗುತ್ತದೆ. ಅದು ಭೂಮಿ ಅಥವಾ ಪರಿಸರವನ್ನು ಸೇರುತ್ತಿದೆ. ಪ್ಲಾಸ್ಟಿಕ್ ಕೊಳೆಯುವ ಅಥವಾ ಕೊರೆಯುವ ಪದಾರ್ಥವಲ್ಲ. ಪ್ಲಾಸ್ಟಿಕ್ ಪ್ರಪಂಚಕ್ಕೆ ಮಾರಕ. ಈ ಅಪಾಯದಿಂದ ಪಾರಾಗಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಹೇಳಿದರು.ಉತ್ತಮ ಪರಿಸರ ಎಂದು ಪರಿಗಣಿಸಬೇದಾದರೆ ಶೇ.33ರಷ್ಟು ಅರಣ್ಯ ಇರಲೇಬೇಕು. ಆದರೆ, ನಮ್ಮ ದೇಶದಲ್ಲಿ ಅಂಥ ಪರಿಸ್ಥಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಮರಗಳ ಸಂಖ್ಯೆ ಕೂಡ ಏರಿಕೆಯಾಗಬೇಕು. ಉತ್ತಮವಾದ ಗಾಳಿ ಮತ್ತು ನೀರನ್ನು ಉಳಿಸದಿದ್ದರೆ ನಮ್ಮ ಮಕ್ಕಳಿಗೆ ನಾವೇ ಮಾರಕವಾಗುತ್ತೇವೆ ಎಂದು ತಿಳಿಸಿದರು.

ರಾಸಾಯನಿಕ ನೀರು ನದಿಗೆ : 

ಕೈಗಾರಿಕೆಗಳು ಹೆಚ್ಚಾಗುತ್ತಿವೆ. ಕೈಗಾರಿಕಾ ತ್ಯಾಜ್ಯ ಅಥವಾ ರಾಸಾಯನಿಕಯುಕ್ತ ನೀರು ನದಿಗಳನ್ನು ಸೇರುತ್ತಿದೆ. ಇದಲ್ಲದೆ ನಗರ ಮತ್ತು ಪಟ್ಟಣಗಳ ಕೊಳಚೆ ನೀರು ಕೂಡ ಕೆರೆ ಮತ್ತು ನದಿಗಳನ್ನು ಸೇರುತ್ತಿದೆ‌. ಇದರಿಂದ ಆಗುತ್ತಿರುವ ಜಲ ಮಾಲಿನ್ಯ ಮತ್ತು ಅದರಿಂದಾಗುವ ಪರಿಸರ ಮಾಲಿನ್ಯ ಅಪಾಯಕಾರಿಯಾದುದು ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ಜಾಗೃತಿ:ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆದರು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷ ಪೂರೈಸಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು ಸುವರ್ಣ ಮಹೋತ್ಸವದ ಗುರಿಯಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.

 ಇಂದಿರಾ ಗಾಂಧಿಯಿಂದ ಹಲವು ಕಾಯಿದೆ: 

ಇಂದಿರಾ ಗಾಂಧಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪನೆ ಮಾಡಿರುವುದು ಮಾತ್ರವಲ್ಲ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದರು. 1972ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಿದರು. ಅದೇ ವರ್ಷ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ - 1972 ಅನ್ನು ಜಾರಿಗೆ ತಂದರು.

 1973ರಲ್ಲಿ ಅಳಿವಿನಂಚಿನಲ್ಲಿರುವ ಹುಲಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಪ್ರಾಜೆಕ್ಟ್ ಟೈಗರ್ ಎಂಬ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ರೂಪಿಸಿದರು. 1974ರಲ್ಲಿ ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು. ಅದೇ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು. 1981ರಲ್ಲಿ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ ಜಾರಿಗೆ ತಂದರು. ಸುವರ್ಣ ಮಹೋತ್ಸವದ ವೇಳೆ ಈ ಕಾಯಿದೆಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ ಎಂದು ನರೇಂದ್ರಸ್ವಾಮಿ ವಿವರಿಸಿದರು.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ