ಕಾರ್ಕಳ : ತುರ್ತು ಸಂದರ್ಭಗಳಲ್ಲಿ ಬಡ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಜೆಕಾರು ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯರು ಆರಂಭಿಸಿರುವ ‘ಸಾರಥಿ ಆಂಬುಲೆನ್ಸ್’ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹುದೊಡ್ಡ ಸವಾಲಾಗಿದೆ. ವೇಗವಾಗಿ ಬೆಳೆಯುತ್ತಿರುವ ಅಜೆಕಾರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಿನ ಡಿಸೆಂಬರ್ ಒಳಗಾಗಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.ವಿಕಾಸ ಸೇವಾ ಸಂಸ್ಥೆಯು ಮಣಿಪಾಲ ಆಸ್ಪತ್ರೆಯ ಸಹಕಾರದೊಂದಿಗೆ ರಿಕ್ಷಾ ಚಾಲಕರಿಗೆ ಆರೋಗ್ಯ ವಿಮೆ ಮಾಡಿಸಿತ್ತು. ಈ ವರ್ಷವೂ ರಿಕ್ಷಾ ಚಾಲಕರಿಗೆ ಆರೋಗ್ಯ ವಿಮೆ ಕಲ್ಪಿಸುವ ಕುರಿತು ಮಣಿಪಾಲ ಆಸ್ಪತ್ರೆಯೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಳ್ಳುವವರನ್ನು ಎಲ್ಲರೂ ಬೆಂಬಲಿಸಬೇಕು. ರಿಕ್ಷಾ ಚಾಲಕರು ಆರಂಭಿಸಿರುವ ಈ ಸೇವಾಕಾರ್ಯ ಮಾದರಿಯಾಗಿದೆ. ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದವರನ್ನು ಎತ್ತಿ ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯುವ ಸಹೃದಯತೆ ರಿಕ್ಷಾ ಚಾಲಕರಲ್ಲಿ ಕಾಣಸಿಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಕುಮಾರ್ ಶೆಟ್ಟಿ, ವೇ.ಮೂ. ಅರುಣ್ ಭಟ್ ಎಣ್ಣೆಹೊಳೆ, ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ ಸುಭವಿ, ಅಜೆಕಾರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಶಾಂತಿರಾಜ ಜೈನ್, ವೈದ್ಯಾಧಿಕಾರಿಗಳಾದ ಡಾ. ಚಂದ್ರಿಕಾ ಕಿಣಿ, ಡಾ. ಅನುಷಾ ಶೆಟ್ಟಿ, ಮರ್ಣೆ ಪಂಚಾಯಿತಿ ಪಿಡಿಒ ಅಂಕಿತಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಕಳ ತಾಲೂಕು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಸದಾನಂದ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.