ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ಶ್ರದ್ಧಾಭಕ್ತಿ ಹಾಗೂ ವೈಭವದಿಂದ ಜರುಗಿತು. ಸಿಡ್ನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉಡುಪಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ಶ್ರದ್ಧಾಭಕ್ತಿ ಹಾಗೂ ವೈಭವದಿಂದ ಜರುಗಿತು. ಸಿಡ್ನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ಪ್ರಧಾನ ಅರ್ಚಕರಾಗಿ ನಿತಿಶ್ ಆಚಾರ್ಯ ಅವರು ಶ್ರೀ ಗುರುರಾಯರ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಷ್ಟೋತ್ತರ ಅರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ವಿಧಿವತ್ತಾಗಿ ನೆರವೇರಿಸಿದರು. ನಾರಾಯಣ ಭಟ್ ಅವರು ಪೂಜಾ ಕಾರ್ಯಗಳಲ್ಲಿ ಸಹಕರಿಸಿದರು. ಭಕ್ತರಿಂದ ಶ್ರೀ ರಾಘವೇಂದ್ರ ಸ್ತೋತ್ರ ಪಾರಾಯಣ, ಅಷ್ಟೋತ್ತರ ಪಾರಾಯಣ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನಡೆದವು. ಮಹೋತ್ಸವದ ಅಂಗವಾಗಿ ಸಾಂಪ್ರದಾಯಿಕ ಉಡುಪಿ ಶೈಲಿಯಲ್ಲಿ ಸಿದ್ಧಪಡಿಸಲಾದ ಭೋಜನ ಪ್ರಸಾದದೊಂದಿಗೆ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ರಿವರ್‌ಸ್ಟೋನ್ ಕ್ಷೇತ್ರದ ಲೇಬರ್ ಪಕ್ಷದ ಸಂಸದ ವಾರೆನ್ ಕಿರ್ಬಿ ಆಗಮಿಸಿ, ರಾಯರ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ಭಾರತೀಯ ಸಮುದಾಯವು ತನ್ನ ಶ್ರೀಮಂತ ಧಾರ್ಮಿಕ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಶ್ರದ್ಧೆಯಿಂದ ಉಳಿಸಿ ಬೆಳೆಸುತ್ತಿರುವುದನ್ನು ಶ್ಲಾಘಿಸಿದರು. ಬಳಿಕ ಅವರು ಭೋಜನ ಪ್ರಸಾದವನ್ನೂ ಸ್ವೀಕರಿಸಿದರು. ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತದಿಂದ ವಿಶೇಷವಾಗಿ ಆಗಮಿಸಿದ್ದ ಶ್ರೀ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಬೆಂಗಳೂರಿನಲ್ಲಿ ಚಾತುರ್ಮಾಸ ವೃತದಲ್ಲಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಪಾದರ ಆಶೀರ್ವಾದ ಹಾಗೂ ಶುಭ ಸಂದೇಶವನ್ನು ಭಕ್ತರಿಗೆ ತಲುಪಿಸಿದರು.
ಒಟ್ಟಿನಲ್ಲಿ, ಸಿಡ್ನಿಯಲ್ಲಿ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ಭಕ್ತಿ, ಸಂಸ್ಕೃತಿ, ಸೌಹಾರ್ದ ಹಾಗೂ ಭಾರತೀಯ ಪರಂಪರೆಯ ಸಮ್ಮಿಲನವಾಗಿ ಅತ್ಯಂತ ವೈಭವಪೂರ್ಣವಾಗಿ ಸಂಪನ್ನಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.